ADVERTISEMENT

ಆರ್ಥಿಕ ಸ್ಪಂದನೆ ಯೋಜನೆಯಡಿ ₹ 39,600 ಕೋಟಿ ಸಾಲ ವಿತರಣೆ –ಯಡಿಯೂರಪ್ಪ

67ನೇ ಅಖಿಲ ಭಾರತ ಸಹಕಾರ ಸಪ್ತಾಹ–2020: ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 8:23 IST
Last Updated 14 ನವೆಂಬರ್ 2020, 8:23 IST
‘ಸಹಕಾರ ರತ್ನ ಪ್ರಶಸ್ತಿ’ ಪಡೆದವರು
‘ಸಹಕಾರ ರತ್ನ ಪ್ರಶಸ್ತಿ’ ಪಡೆದವರು   

ಬೆಂಗಳೂರು: ‘ಸಹಕಾರ ಇಲಾಖೆಯ ‘ಆರ್ಥಿಕ ಸ್ಪಂದನ’ ಯೋಜನೆಯಡಿ ವಿವಿಧ ವಲಯಗಳ ಜನರಿಗೆ ಈವರೆಗೆ ₹ 39,600 ಕೋಟಿ ಸಾಲ ವಿತರಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ‘67ನೇ ಅಖಿಲ ಭಾರತ ಸಹಕಾರ ಸಪ್ತಾಹ–2020’ ಉದ್ಘಾಟಿಸಿ ಮಾತನಾಡಿದ ಅವರು, ‘ಆತ್ಮ ನಿರ್ಭರ್‌ ಪ್ಯಾಕೇಜ್‌ ಅಡಿ ಈಗಾಗಲೇ ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆಗಳನ್ನು ಘೋಷಿಸಿದೆ. ರೈತ ಉತ್ಪಾದಕ ಸಂಸ್ಥೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲಿಷ್ಠಗೊಳಿಸಲು ₹ 4,525 ಕೋಟಿಯನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ’ ಎಂದರು.

‘ಕೇಂದ್ರದ ಅನುದಾನದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಗೋದಾಮು, ಕೊಯ್ಲು ನಂತರದ ಪರಿಷ್ಕರಣೆ, ಕೃಷಿ ಉತ್ಪನ್ನಗಳನ್ನು ರೈತರ ಜಮೀನಿನಿಂದಲೇ ಸಾಗಿಸಲು ಸಾರಿಗೆ ವ್ಯವಸ್ಥೆ, ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹುಪಯೋಗಿ ಸೇವೇ ಕೇಂದ್ರಗಳಾಗಿ ಪರಿವರ್ತನೆಗೊಳಿಸಲಾಗುತ್ತಿದೆ. ಈ ಯೋಜನೆಯಡಿ 1,549 ಸಹಕಾರ ಸಂಘಗಳು ಯೋಜನೆಯ ಲಾಭ ಪಡೆಯಲಿವೆ. ಈಗಾಗಲೇ 211 ಪ್ಯಾಕ್ಸಗಳನ್ನು ಯೋಜನೆಗೆ ಸೇರ್ಪಡೆ ಮಾಡಲಾಗಿದೆ’ ಎಂದೂ ವಿವರಿಸಿದರು.

ADVERTISEMENT

‘ಸಹಕಾರ ಸಂಘಗಳ ಉಳಿದ ವಲಯಗಳ ಬಲವರ್ಧನೆಗೂ ರಾಜ್ಯ ಸರ್ಕಾರ ಯೋಜನೆಗಳನ್ನು ಹಮ್ಮಿಕೊಳ್ಳಲಿದೆ. ಪ್ರಸಕ್ತ ಸಾಲಿನಲ್ಲಿ 15 ಲಕ್ಷಕ್ಕೂ ಹೆಚ್ಚು ರೈತರಿಗೆ ₹ 9,502.62 ಕೋಟಿ ಬೆಳೆ ಸಾಲ ವಿತರಿಸಲಾಗಿದೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ರಾಜ್ಯದಲ್ಲಿ 45 ಸಾವಿರ ಸಹಕಾರ ಸಂಘಗಳಿವೆ. ಅದರಲ್ಲಿ 2.30 ಕೋಟಿ ಸದಸ್ಯರಿದ್ದಾರೆ. ಸಹಕಾರ ಕ್ಷೇತ್ರಕ್ಕೆ ಗಾಂಧಿ ಕೊಡುಗೆ ಅವಿಸ್ಮರಣೀಯ. ಕೊರೊನಾ ಕಾರಣದಿಂದ ಕುಸಿದಿದ್ದ ಆರ್ಥಿಕ ಸ್ಥಿತಿ ಮತ್ತೆ ಚೇತರಿಕೆ ಕಾಣುತ್ತಿದೆ. ಸಹಕಾರ ಇಲಾಖೆ ₹ 53 ಕೋಟಿ ಮೊತ್ತವನ್ನು ಕೊರೊನಾ ಪರಿಹಾರ ನಿಧಿಗೆ ಕೊಟ್ಟಿದೆ’ ಎಂದರು.

ಸಹಕಾರ ಕ್ಷೇತ್ರದಲ್ಲಿ ಸಾಧನೆಗಾಗಿ ಇಬ್ಬರು ಅಧಿಕಾರಿಗಳು ಮತ್ತು 29 ಸಾಧಕರಿಗೆ ‘ಸಹಕಾರ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಕಂದಾಯ ಸಚಿವ ಆರ್‌. ಅಶೋಕ ಇದ್ದರು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು: ಕೆಎಂಎಫ್‌ ನಿರ್ದೇಶಕ, ಶಾಸಕ ಎಚ್‌.ಡಿ. ರೇವಣ್ಣ (ಹಾಸನ), ಬಾಗಲಕೋಟೆ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ, ವಿಧಾನಪರಿತ್‌ನ ವಿರೋಧ ಪಕ್ಷದ ನಾಯಕ ಎಸ್‌. ಆರ್‌. ಪಾಟೀಲ (ಬಾಗಲಕೋಟೆ), ಕರ್ನಾಟಕ ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ, ಮಾಜಿ ಶಾಸಕ ಕೆ. ಷಡಾಕ್ಷರಿ (ತುಮಕೂರು), ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಭಂಡಾರಿ (ದಕ್ಷಿಣ ಕನ್ನಡ), ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಉಪಾಧ್ಯಕ್ಷ ಬಸಗೌಡ ರಾಮಗೌಡ ಪಾಟೀಲ (ಬೆಳಗಾವಿ), ಕರ್ನಾಟಕ ರಾಜ್ಯ ಸಹಕಾರ ಚಲನಚಿತ್ರ ಮತ್ತು ಲಲಿತಾಕಲಾ ಮಹಾಮಂಡಲದ ಅಧ್ಯಕ್ಷ ಎನ್‌.ಎ. ಚಿದಂಬರ (ಬೆಂಗಳೂರು ನಗರ), ಎಸ್.ಎಸ್‌. ಪಾಟೀಲ (ಹಾವೇರಿ), ಮಾತಂಡ ಎ. ರಮೇಶ್ (ಕೊಡಗು), ಉಮಾಕಾಂತ ನಾಗಮಾರಪಳ್ಳಿ (ಬೀದರ್‌), ಕೆ.ಪಿ. ಬಚ್ಚೇಗೌಡ (ಚಿಕ್ಕಬಳ್ಳಾಪುರ), ಮೀನಾಕ್ಷಿ ಆರ್‌. ಕಲ್ಲೂರ (ವಿಜಯಪುರ), ಶ್ರೀಕಂಠಯ್ಯ (ಬೆಂಗಳೂರು ನಗರ), ಗದಿಗೆಪ್ಪ ಗೌಡ ಪರ್ವತಗೌಡ ಪಾಟೀಲ (ಗದಗ) , ಶಿವಯೋಗಿಸ್ವಾಮಿ ನೀಲಕಂಠಯ್ಯ ಹಿರೇಮಠ (ಹಾವೇರಿ). ಎಸ್‌.ಕೆ. ನಾಗರತ್ನ ರಾವ್‌ (ಬೆಂಗಳೂರು), ಕಿಲಾರ ಕೃಷ್ಣ (ಮಂಡ್ಯ), ಪಿ, ನಾಗರಾಜು (ರಾಮನಗರ), ನರಸಿಂಹ ಮೂರ್ತಿ (ರಾಮನಗರ), ಲಲಿತಾ ಜಿ.ಟಿ. ದೇವೇಗೌಡ (ಮೈಸೂರು), ಶಿವಾನಂದ ಅಪ್ಪಾಸಾಬ್‌ ಮಾನೇಕರ್‌ (ಕಲಬುರ್ಗಿ), ಎನ್‌. ಚಂದ್ರಪ್ಪ (ಬೆಂಗಳೂರು), ರವೀಂದ್ರ ನಾರಾಯಣ ಪವಾರ್ (ಉತ್ತರ ಕನ್ನಡ), ಎಂ. ಬಾಹುಬಲಿ ಪ್ರಸಾದ್‌ (ದಕ್ಷಿಣ ಕನ್ನಡ), ಬಿ.ಕೆ. ನಾಗರಾಜ್‌ ರಾವ್‌ (ಬಳ್ಳಾರಿ), ಚಂದ್ರ ಕೋಲ್ಚಾರು (ದಕ್ಷಿಣ ಕನ್ನಡ), ತೋಟಪ್ಪ ತಂದೆ ಹನುಮಂತಪ್ಪ ಕಾಮನೂರ (ಕೊಪ್ಪಳ), ಮಲ್ಲಿಕಾರ್ಜುನ ಗೌಡ ಪಾಟೀಲ (ಕೊಪ್ಪಳ). ವಿಶ್ವನಾಥ ಪಾಟೀಲ (ರಾಯಚೂರು), ನಂದಿನಿ (ಬೆಂಗಳೂರು),

ಸಹಕಾರ ಪ್ರಶಸ್ತಿ ಪುರಸ್ಕೃತ ಅಧಿಕಾರಿಗಳು:ಬಿ. ನಾಗರಾಜ್‌, ಎಸ್‌. ಮೆಹಬೂಬ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.