ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಯಾನಿ ರವಿ (35) ಸೋಮವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು.
‘ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ರವಿ ಚಿಕ್ಕಪ್ಪ ಮಹದೇವಪ್ಪಗುಂಡ್ಲುಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
’ಗ್ರಾಮದ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ರವಿ ತರಕಾರಿ ವ್ಯಾಪಾರವನ್ನೂ ಮಾಡುತ್ತಿದ್ದರು. ಕೆಲವರಿಂದ ಹಣ ಸಾಲ ಪಡೆದಿದ್ದರು’ ಎಂದೂ ಗ್ರಾಮಸ್ಥರು ಹೇಳಿದ್ದಾರೆ. ರವಿ ಸೋಮವಾರ ಸ್ನೇಹಿತರೊಂದಿಗೆ ನೋವು ತೋಡಿಕೊಂಡಿದ್ದು, ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲೇ ನೇಣುಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ ರವಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದು, ಕುಟುಂಬವನ್ನು ಶೀಘ್ರದಲ್ಲಿ ಭೇಟಿ ಮಾಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಘಟನೆಗೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಯಡಿಯೂರಪ್ಪ, ‘ಈ ಸುದ್ದಿ ಅತೀವ ನೋವು ಹಾಗೂ ಬೇಸರ ತರಿಸಿದೆ. ರಾಜಕಾರಣದಲ್ಲಿ ಏರಿಳಿತಗಳು ಸಹಜ. ಇದಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಳ್ಳಲು ಮುಂದಾಗುವುದು ಸರ್ವಥಾ ಒಪ್ಪಲಾಗದು.
ಇದರಿಂದ ಕುಟುಂಬಕ್ಕಾಗುವ ನಷ್ಟ ಯಾರಿಂದಲೂ ಭರಿಸಲಾಗದು. ಅಭಿಮಾನ ಅತಿರೇಕಕ್ಕೆ ಹೋಗಬಾರದೆಂದು ಕೈ ಮುಗಿದು ವಿನಂತಿಸುವೆ. ರವಿ ಕುಟುಂಬದ ನೋವಿನೊಂದಿಗೆ ನಾನಿರುವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.