ಉಡುತಡಿ (ಶಿವಮೊಗ್ಗ): ಅಲ್ಲಮಪ್ರಭು ಜನ್ಮಸ್ಥಳ ಶಿಕಾರಿಪುರ ತಾಲ್ಲೂಕು ಬಳ್ಳಿಗಾವಿಯ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ₹5 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ಶುಕ್ರವಾರ 12ನೇ ಶತಮಾನದ ವಚನಗಾರ್ತಿ ಅಕ್ಕಮಹಾದೇವಿಯ 65 ಅಡಿ ಎತ್ತರದ ಪುತ್ಥಳಿ ಉದ್ಘಾಟಿಸಿ ಮಾತನಾಡಿದ ಅವರು, ಉಡುತಡಿಯಲ್ಲಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರ ಆರಂಭಿಸಲು ₹10 ಕೋಟಿ ಹಾಗೂ ಶಿವನಪಾದ ಕ್ಷೇತ್ರದ ಅಭಿವೃದ್ಧಿಗೆ ₹10 ಕೋಟಿ ಕೊಡುವುದಾಗಿ ಹೇಳಿದರು.
ಬಿಎಸ್ ವೈ ಗುಣಗಾನ: ತಮ್ಮ ಭಾಷಣದ ಬಹುತೇಕ ಸಮಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೊಗಳಿಕೆಗೆ ಮೀಸಲಿಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾನು ಕಷ್ಟದಲ್ಲಿದ್ದಾಗ ಕರೆದು ಶಕ್ತಿ ಕೊಟ್ಟವರು ಯಡಿಯೂರಪ್ಪ. ನಾವೆಲ್ಲ ಅವರ ನೆರಳಲ್ಲೇ ಬೆಳೆದವರು. ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದ ದಿನ ಹೇಳಿದ್ದ ಮಾತಿಗೆ ಇಂದಿಗೂ ಬದ್ಧನಾಗಿರುವೆ. ಅವರ ಮಾರ್ಗದರ್ಶನದಲ್ಲೇ ಮುಂದುವರೆಯುವೆ ಎಂದರು.
'ನನ್ಮದೇನೂ ಇಲ್ಲ. ಯಡಿಯೂರಪ್ಪ ಅವರೇ ಶಕ್ತಿ. ನಾನು ನಿಮಿತ್ತ ಮಾತ್ರಂ' ಎಂದು ಮಾರ್ಮಿಕವಾಗಿ ಹೇಳಿದ ಬಸವರಾಜ ಬೊಮ್ಮಾಯಿ, 'ಯಡಿಯೂರಪ್ಪ ರಾಜಕೀಯದಿಂದ ನಿವೃತ್ತಿ ಆಗುವ ಪ್ರಶ್ನೆಯೇ ಇಲ್ಲ. ಮಂತ್ರಿ, ಮುಖ್ಯಮಂತ್ರಿ ಆಗುವುದು ಬೇರೆ ಜನನಾಯಕ ಆಗುವುದು ಬೇರೆ. ಯಡಿಯೂರಪ್ಪ ನಿಜವಾದ ಜನನಾಯಕ' ಎಂದು ಶ್ಲಾಘಿಸಿದರು.
'ಕಲ್ಯಾಣ ಕ್ರಾಂತಿಯ 9 ಶತಮಾನಗಳ ನಂತರ ಶಿವ ಶರಣರ ನಾಡು ಶಿಕಾರಿಪುರ ಹಾಗೂ ಬೀದರ್ ನ ಬಸವ ಕಲ್ಯಾಣವನ್ನು ಬೆಸೆದ ನಾಯಕನೊಬ್ಬ ಯಡಿಯೂರಪ್ಪ ಅವರ ರೂಪದಲ್ಲಿ ಹುಟ್ಟಿದ್ದಾನೆ' ಎಂದು ಬಣ್ಣಿಸಿದ ಬೊಮ್ಮಾಯಿ, ಯಡಿಯೂರಪ್ಪ ಸರ್ವ ಸಮಾಜಕ್ಕೂ ನ್ಯಾಯ ಕೊಟ್ಟಿದ್ದಾರೆ ಎಂದರು.
ವಿಜಯೇಂದ್ರಗೆ ಆಶೀರ್ವಾದ ಮಾಡಿ: ಸರ್ಕಾರಿ ಕಾರ್ಯಕ್ರಮದ ವೇದಿಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶಿಕಾರಿಪುರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸಂದೇಶ ನೀಡಲು ಬಳಕೆಯಾಯಿತು.
'ಈ ಬಾರಿ ವಿಜಯೇಂದ್ರ ಅವರಿಗೆ ಆಶೀರ್ವಾದ ಮಾಡಿ' ಎಂದು ಭಾಷಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರೆ, ವಿಜಯಣ್ಣನಿಗೆ ಹಾರೈಸಿ ಎಂದು ಸಂಸದ ಬಿ.ವೈ.ರಾಘವೇಂದ್ರ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.