ADVERTISEMENT

ಎತ್ತಿನ ಹೊಳೆ: ಉಕ್ಕಿದ ನೀರು- ಉಕ್ಕೇರಿದ ಸಂಭ್ರಮ!

ಬರದ ನಾಡು ಬೆಳಗಲು ಪೂರ್ವಾಭಿಮುಖವಾಗಿ ಹರಿಯಿತು ಎತ್ತಿನ ಹೊಳೆ

ಬಾಲಕೃಷ್ಣ ಪಿ.ಎಚ್‌
Published 7 ಸೆಪ್ಟೆಂಬರ್ 2024, 0:24 IST
Last Updated 7 ಸೆಪ್ಟೆಂಬರ್ 2024, 0:24 IST
   

ಹೆಬ್ಬನಹಳ್ಳಿ (ಸಕಲೇಶಪುರ): ಇಲ್ಲಿನ ದೊಡ್ಡನಗರದ ಪಂಪ್ ಹೌಸ್‌ನಲ್ಲಿ ನೀರೆತ್ತುವ ಪಂಪ್‌ಗಳಿಗೆ ಶುಕ್ರವಾರ ಚಾಲನೆ ದೊರಕಿದ ಕೆಲ ಹೊತ್ತಿನಲ್ಲಿ ಸುಮಾರು 6 ಕಿಲೋಮೀಟರ್‌ ದೂರದ ಹೆಬ್ಬನಹಳ್ಳಿಯಲ್ಲಿರುವ ನೀರು ವಿತರಣೆಯ ನಾಲ್ಕು ತೊಟ್ಟಿಗಳಲ್ಲಿ ನೀರು ಉಕ್ಕೇರಿತು. ಇದರೊಂದಿಗೆ ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯ ದಶಕದ ಕನಸು ನನಸಾದ ಸಂಭ್ರಮ ಜನರಲ್ಲಿ ಉಕ್ಕಿ ಹರಿಯಿತು.

ಪಶ್ಚಿಮಕ್ಕೆ ಹರಿದು ನೇತ್ರಾವತಿ ನದಿಯಾಗಿ ಕರಾವಳಿಯಲ್ಲಿ ಸಾಗುತ್ತಿದ್ದ ಎತ್ತಿನ ಹೊಳೆ, ಕಾಡುಮನೆ ಹೊಳೆ, ಹೊಂಗಡ ಹಳ್ಳ, ಕೇರಿ ಹೊಳೆ ಶುಕ್ರವಾರದಿಂದ ಪೂರ್ವಾಭಿಮುಖವಾಗಿಯೂ ಹರಿಯ ತೊಡಗಿದವು. ಪಶ್ಚಿಮಕ್ಕೆ ಹರಿಯುತ್ತಿದ್ದ ನೀರಿನಲ್ಲಿ ಒಂದಂಶ ನೀರನ್ನು ಪೂರ್ವದ ಜಿಲ್ಲೆಗಳಿಗೆ ಹರಿಸುವ ಈ ಯೋಜನೆಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು.

ಜಲ ಸಂಪನ್ಮೂಲ ಇಲಾಖೆ, ವಿಶ್ವೇಶ್ವರಯ್ಯ ಜಲ ನಿಗಮ ರೂಪಿಸಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1 ಇದಾಗಿದ್ದು, 2027ರ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಈ ಯೋಜನೆಯನ್ನು 2010ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರವು ರೂಪಿಸಿತ್ತು. 2012ರಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರು ₹8,000 ಕೋಟಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರು. 2014ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಯೋಜನೆಗೆ ಭೂಮಿಪೂಜೆ ನೆರವೇರಿಸಿದ್ದರು. ಈಗ ಅವರೇ ಯೋಜನೆಯಡಿ ಮೊದಲ ಹಂತದಲ್ಲಿ ನೀರು ಹರಿಸುವ ಕಾರ್ಯಕ್ಕೂ ಚಾಲನೆ ನೀಡಿದರು.

ADVERTISEMENT

ಈ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ನೀರು ಹರಿಯಲಿದೆ.

ಮೊದಲ ಹಂತದಲ್ಲಿ ಗುರುತ್ವ ಕಾಲುವೆಯಿಂದ 32.5 ಕಿ.ಮೀ. ನಾಲಾ ಎಸ್ಕೇಪ್ ಮೂಲಕ ವೇದ ವ್ಯಾಲಿಯನ್ನು ನೀರು ಪ್ರವೇಶಿಸಲಿದೆ. ಹಳೇಬೀಡು ಕೆರೆ, ಬೆಳವಾಡಿ ಕೆರೆ ಪ್ರವೇಶಿಸಿ, ಚಿತ್ರದುರ್ಗದ ವಾಣಿ ವಿಲಾಸ ಸಾಗರಕ್ಕೆ ಹರಿಯಲಿದೆ.

ಆರು ಪಂಪ್‌ಗಳು ನಿರಂತರವಾಗಿ ನೀರೆತ್ತಲಿದ್ದು, ಒಂದು ಪಂಪ್‌ ಹೆಚ್ಚುವರಿಯಾಗಿ ಇರಲಿದೆ. ಯಾವುದಾದರೂ ಒಂದು ಪಂಪ್ ಕೈಕೊಟ್ಟರೆ ಈ ಹೆಚ್ಚುವರಿ ಪಂಪ್‌ ಬಳಕೆಯಾಗಲಿದೆ. ಎಲ್ಲ ಲಿಫ್ಟ್‌ಗಳ (ಏತ) ಮೂಲಕ ದಿನಕ್ಕೆ 85 ಕ್ಯುಮೆಕ್ಸ್ ನೀರು ಹರಿಯಲಿದೆ.

‘ಇನ್ನೂ ಐದು ಟಿಎಂಸಿ ಅಡಿ ನೀರು ಪೂರೈಕೆ’

ಎತ್ತಿನಹೊಳೆ ಯೋಜನೆಯಡಿ ಸದ್ಯ 19 ಟಿಎಂಸಿ ಅಡಿ ನೀರು ಸಿಗುತ್ತಿದ್ದು, ತಗ್ಗುಪ್ರದೇಶದ ಇನ್ನಷ್ಟು ಹಳ್ಳಗಳಿಂದ ನೀರು ಎತ್ತುವ ಮೂಲಕ ಕೊರತೆ ಇರುವ 5 ಟಿಎಂಸಿ ಅಡಿ ನೀರನ್ನು ಒದಗಿಸಲಾಗು
ವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಯ ಹಂತ 1ಕ್ಕೆ ಶುಕ್ರವಾರ ಹೆಬ್ಬನಹಳ್ಳಿಯಲ್ಲಿ
ನೀರು ವಿತರಣಾ ತೊಟ್ಟಿಗಳಿಗೆ ಬಾಗಿನ ಅರ್ಪಿಸಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.