ADVERTISEMENT

ಎತ್ತಿನಹೊಳೆಗೆ ಮತ್ತೆ 500 ಎಕರೆ ಅರಣ್ಯ; ಕೇಂದ್ರಕ್ಕೆ ಪ್ರಸ್ತಾವನೆ

ಕೇಂದ್ರಕ್ಕೆ ವಿಶ್ವೇಶ್ವರಯ್ಯ ಜಲ ನಿಗಮ ಪ್ರಸ್ತಾವನೆ

ಮಂಜುನಾಥ್ ಹೆಬ್ಬಾರ್‌
Published 13 ನವೆಂಬರ್ 2024, 23:55 IST
Last Updated 13 ನವೆಂಬರ್ 2024, 23:55 IST
<div class="paragraphs"><p> ಎತ್ತಿನಹೊಳೆ ಯೋಜನೆ ಕಾಮಗಾರಿ</p></div>

ಎತ್ತಿನಹೊಳೆ ಯೋಜನೆ ಕಾಮಗಾರಿ

   

ನವದೆಹಲಿ: ಬರದಿಂದ ಬಸವಳಿದ ಬಯಲುಸೀಮೆಯ ಜಿಲ್ಲೆಗಳಿಗೆ ನೀರುಣಿಸುವ ಉದ್ದೇಶ ಹೊಂದಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಮತ್ತೆ 500 ಎಕರೆ (199 ಹೆಕ್ಟೇರ್) ಅರಣ್ಯ ಬಳಸಿಕೊಳ್ಳಲು ವಿಶ್ವೇಶ್ವರಯ್ಯ ಜಲ ನಿಗಮ ತೀರ್ಮಾನಿಸಿದೆ. ಗುರುತ್ವಾಕರ್ಷಣೆ ಕಾಲುವೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹಾಸನ ಹಾಗೂ ತುಮಕೂರು ಜಿಲ್ಲೆಗಳ ಅರಣ್ಯ ಬಳಸಿಕೊಳ್ಳಲು ಅನುಮೋದನೆ ನೀಡುವಂತೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ನಿಗಮ ಪ್ರಸ್ತಾವನೆ ಸಲ್ಲಿಸಿದೆ. 

ಯೋಜನೆಯ ಮೊದಲನೇ ಹಂತ ಎರಡು ತಿಂಗಳ ಹಿಂದೆಯಷ್ಟೇ ಸಾಕಾರಗೊಂಡಿತ್ತು. ಅದೇ ಸಮಯದಲ್ಲಿ, ಇಡೀ ಯೋಜನೆಯ ಕಾರ್ಯಸಾಧ್ಯತೆಯ ವರದಿ ಸಲ್ಲಿಸಬೇಕು ಎಂದು ಅರಣ್ಯ ಸಚಿವಾಲಯ ತಾಕೀತು ಮಾಡಿತ್ತು. ‘ಈ ಯೋಜನೆಗಾಗಿ 3 ಸಾವಿರ ಎಕರೆ ಜಾಗ ಬಳಸಿಕೊಳ್ಳಲಾಗುತ್ತಿದೆ. ಅದರಲ್ಲಿ ಅರಣ್ಯ ಪ್ರದೇಶದ ಪಾಲು ಶೇ 50ರಷ್ಟಿದೆ. ಈ ಅರಣ್ಯ ಬಳಕೆಗೆ ರಾಜ್ಯ ಸರ್ಕಾರ ಒಂದೇ ಹಂತದಲ್ಲಿ ಪ್ರಸ್ತಾವನೆ ಸಲ್ಲಿಸುತ್ತಿಲ್ಲ. ಪ್ರತ್ಯೇಕ ಪ್ರತ್ಯೇಕವಾಗಿ ಪ್ರಸ್ತಾವನೆ ಸಲ್ಲಿಸುತ್ತಿದೆ. ಇಂತಹ ಧೋರಣೆ ಸರಿಯಲ್ಲ’ ಎಂದು ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ, ನಿಗಮವು ಮತ್ತೊಂದು ಪ್ರಸ್ತಾವನೆ ಸಲ್ಲಿಸಿದೆ. 

ADVERTISEMENT

ಗುರುತ್ವಾಕರ್ಷಣೆಯ ಕಾಲುವೆ ನಿರ್ಮಾಣಕ್ಕೆ ಹಾಸನ ಜಿಲ್ಲೆಯ ಏಳು ಗ್ರಾಮಗಳು ಹಾಗೂ ತುಮಕೂರು ಜಿಲ್ಲೆಯ ಕಂಚಿನಗಾನಹಳ್ಳಿ ಹಾಗೂ ಇತರ ಆರು ಗ್ರಾಮಗಳ ಮೀಸಲು ಅರಣ್ಯ ಪ್ರದೇಶ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಯೋಜನೆಗಾಗಿ ಕನಿಷ್ಠ ಪ್ರಮಾಣದ ಅರಣ್ಯ ಬಳಸಿಕೊಳ್ಳಲಾಗುತ್ತಿದೆ ಎಂದು ನಿಗಮವು ಸಮಜಾಯಿಷಿ ನೀಡಿದೆ. 

ಯೋಜನೆಗಾಗಿ ಹಾಸನ ಜಿಲ್ಲೆಯಲ್ಲಿ 819 ಹೆಕ್ಟೇರ್ ಅರಣ್ಯೇತರ ಹಾಗೂ 159 ಹೆಕ್ಟೇರ್ ಅರಣ್ಯ, ತುಮಕೂರು ಜಿಲ್ಲೆಯಲ್ಲಿ 1,215 ಹೆಕ್ಟೇರ್ ಅರಣ್ಯೇತರ ಹಾಗೂ 33 ಹೆಕ್ಟೇರ್ ಅರಣ್ಯ ಭೂಮಿ ಬಳಸಿಕೊಳ್ಳಲಾಗುತ್ತದೆ. 

ಅರಣ್ಯ ಇಲಾಖೆಯು ಪರಿಹಾರಾತ್ಮಕ ಅರಣ್ಯೀಕರಣದ ಯೋಜನೆಯನ್ನು ಸಲ್ಲಿಸಿಲ್ಲ ಎಂದು ಸಚಿವಾಲಯವು ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿತ್ತು. ಪರಿಹಾರಾತ್ಮಕ ಅರಣ್ಯೀಕರಣಕ್ಕೆ 159 ಹೆಕ್ಟೇರ್ ಗುರುತಿಸಲಾಗಿದೆ ಎಂದು ನಿಗಮವು ಪ್ರಸ್ತಾವನೆಯಲ್ಲಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.