ಬೆಂಗಳೂರು: ‘ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ನಿಗದಿಪಡಿಸಿರುವ ದೋಷಾರೋಪಣೆಯಲ್ಲಿ ಸಾಕಷ್ಟು ದೋಷಗಳಿವೆ’ ಎಂದು ಆಕ್ಷೇಪಿಸಿ ಪ್ರಕರಣದ ಆರೋಪಿಯೂ ಆದ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತಂತೆ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠ’ದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಸೋಮವಾರ ಪ್ರಕಟಿಸಿದ್ದು, ‘ಜನಪ್ರತಿನಿಧಿಗಳ ನ್ಯಾಯಾಲಯ ಮೂರು ತಿಂಗಳಲ್ಲಿ ವಿಚಾರಣೆ ಮುಕ್ತಾಯಗೊಳಿಸಬೇಕು’ ಎಂದು ಆದೇಶಿಸಿದೆ.
‘ನನ್ನ ವಿರುದ್ಧ ನಿಗದಿಪಡಿಸಲಾಗಿರುವ ದೋಷಾರೋಪ ಮತ್ತು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣಾ ನ್ಯಾಯಾಲಯದ ನ್ಯಾಯ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂಬ ಅರ್ಜಿದಾರರ ಕೋರಿಕೆಯಲ್ಲಿ ಯಾವುದೇ ಹುರುಳಿಲ್ಲ. ನಮಗೆ ದಾಖಲೆ ಕೊಟ್ಟಿಲ್ಲ. ದೋಷಾರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ ಮೇಲೆ ಆರೋಪಿಯನ್ನು ಕೇಳಬೇಕಿತ್ತು. ನಮ್ಮನ್ನು ಕೇಳದೆ ಹೇಗೆ ದೋಷಾರೋಪ ನಿಗದಿಗೊಳಿಸುತ್ತಾರೆ. ಆ ಸಮಯದಲ್ಲಿ ಅದಕ್ಕೆ ಸೀಮಿತವಾದ ನಮ್ಮ ವಾದವನ್ನೂ ಕೇಳಬೇಕಿತ್ತು. ಇದು ಸಹಜ ನ್ಯಾಯ ಪ್ರಕ್ರಿಯೆಗೆ ವಿರುದ್ಧವಾಗಿದೆ ಎಂಬುದನ್ನು ಸದಾ ಮಂತ್ರದ ರೀತಿಯ ಜಪ ಮಾಡುವುದರಲ್ಲಿ ಅರ್ಥವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.
‘ಈಗಾಗಲೇ ನಿಗದಿಗೊಳಿಸಲಾದ ಆರೋಪಗಳನ್ನು ಕಿತ್ತು ಹಾಕಬೇಕು ಎಂಬ ವಾದ ಸಮರ್ಥನೀಯವಾಗಿಲ್ಲ. ವಿಚಾರಣಾ ನ್ಯಾಯಾಲಯದಲ್ಲಿ ವಕೀಲ ಸಿ.ಎಚ್.ಹನುಮಂತರಾಯರು ಸಹಿ ಮಾಡಿಯೇ ಎಲ್ಲ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಇಂತಿಂತಹ ದಾಖಲೆಗಳನ್ನು ನಮಗೆ ಕೊಟ್ಟಿಲ್ಲ ಎಂದು ಅವರು ಎಲ್ಲೂ ತಕರಾರು ವ್ಯಕ್ತಪಡಿಸಿಲ್ಲ ಅಥವಾ ಆ ನೆಲೆಯಲ್ಲಿ ಈಗಿನ ದಾವೆಯನ್ನೂ ತಯಾರು ಮಾಡಿಲ್ಲ. ಮೂಲ ನಿರೂಪಣಾ ಅರ್ಜಿಯಲ್ಲಿ (ರಿಟ್ ಅರ್ಜಿ) ಈ ಮುದ್ದಾ ಉದ್ಭವ ಆಗಿಯೇ ಇಲ್ಲ. ಆದ್ದರಿಂದ, ಅರ್ಜಿದಾರರ ಹಾಲಿ ದಾವೆಯಲ್ಲಿನ ಕೋರಿಕೆ ಒಂದು ರೀತಿಯಲ್ಲಿ ಪಶ್ಚಾತ್ ಚಿಂತನೆಯ ಸ್ವರೂಪದ್ದಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ಆರೋಪಗಳ ನಿಗದೀಕರಣ ಪ್ರಕ್ರಿಯೆಯಲ್ಲಿ ಆರೋಪಿಗಳ ವಾದವನ್ನು ಕೇಳಿಯೇ ನ್ಯಾಯಾಧೀಶರು ಮುಂದುವರಿಯಬೇಕು ಎಂಬ ಪ್ರತಿಪಾದನೆಗೆ ಇಂಬು ನೀಡುವಂತಹ ಯಾವುದೇ ಕಾನೂನುಗಳು ಇಲ್ಲ. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಧೀಶರು ಸರಿಯಾಗಿಯೇ ನಡೆದುಕೊಂಡಿದ್ದಾರೆ. ಅಂತೆಯೇ, ಆರೋಪ ನಿಗದಿಪಡಿಸುವ ಪ್ರಕ್ರಿಯೆಯನ್ನು ಮಿನಿ ಟ್ರಯಲ್ ಎಂದು ಪರಿಗಣಿಸಲು ಆಗುವುದಿಲ್ಲ. ಅದು ಸರಸರನೇ ದೃಷ್ಟಿ ಹಾಯಿಸಿ ಓದುವ ಮುಂದುವರಿಕೆಯ ಮಿತಿಗೆ ಒಳಪಟ್ಟಿರುತ್ತದೆ ಎಂಬುದನ್ನು ಮರೆಯಬಾರದು. ಹೀಗಿರುವಾಗ ಆರೋಪಗಳ ನಿಗದಿ ಕಾರಣಕ್ಕೆ ಕಾನೂನು ಲೋಪ ಆಗಲಿದೆ ಎಂಬ ವಾದವನ್ನು ಪುರಸ್ಕರಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ವಿವರಿಸಿದೆ.
ವಿನಯ ಕುಲಕರ್ಣಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಮತ್ತು ಸಿಬಿಐ ಪರ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.
ಪ್ರಕರಣವೇನು?
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್ 15ರಂದು ಯೋಗೀಶ್‌ಗೌಡ ಗೌಡರ್ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಸಿಸಿಎಚ್–82ರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಟ್ಟು 21 ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಪಡಿಸಿ 2024ರ ಜನವರಿ 29ರಿಂದ ಫೆಬ್ರುವರಿ 1ರವರೆಗೆ ನಿಯಮಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಆದೇಶಿಸಿತ್ತು. ಪ್ರಕರಣದ ಆರೋಪಿಯೂ ಆದ ವಿನಯ ಕುಲಕರ್ಣಿ, ದೋಷಾರೋಪ ನಿಗದಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.