ADVERTISEMENT

ಯೋಗೀಶ್‌ಗೌಡ ಕೊಲೆ ಪ್ರಕರಣ | ವಿನಯ ಕುಲಕರ್ಣಿ ಅರ್ಜಿ: ಕಾ‌ಯ್ದಿರಿಸಿದ ಆದೇಶ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 16:25 IST
Last Updated 25 ನವೆಂಬರ್ 2024, 16:25 IST
<div class="paragraphs"><p>ಹೈಕೋರ್ಟ್‌&nbsp;</p></div>

ಹೈಕೋರ್ಟ್‌ 

   

ಬೆಂಗಳೂರು: ‘ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೊದಲ ಆರೋಪಿ ಬಸವರಾಜ ಮುತ್ತಗಿ ಮಾಫಿ ಸಾಕ್ಷಿಯಾಗಿರುವುದನ್ನು ಪರಿಗಣಿಸಿರುವ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿ ಶಾಸಕ ವಿನಯ ಕುಲಕರ್ಣಿ ಸಲ್ಲಿಸಿರುವ ಅರ್ಜಿ ಮೇಲಿನ ಆದೇಶವನ್ನು ಹೈಕೋರ್ಟ್‌ ಕಾಯ್ದಿರಿಸಿದೆ.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ವಿನಯ ಕುಲಕರ್ಣಿ ಪರ ಹಾಜರಾಗಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್‌, ‘ಆರೋಪಿ ಬಸವರಾಜ ಮುತ್ತಗಿ ಹೇಳಿಕೆಯನ್ನು ಪರಿಗಣಿಸುವಾಗ ಸೂಕ್ತ ಕಾನೂನು ಕ್ರಮಗಳ ಪಾಲನೆ ಆಗಿಲ್ಲ. ಹಾಗಾಗಿ, ಸೆಷನ್ಸ್‌ ಕೋರ್ಟ್‌ ಬಸವರಾಜ ಮುತ್ತಗಿಯನ್ನು ಮಾಫಿ ಸಾಕ್ಷಿ ಎಂದು ಪರಿಗಣಿಸಿರುವ ಕ್ರಮವನ್ನು ರದ್ದುಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ADVERTISEMENT

ಇದಕ್ಕೆ ಪ್ರತಿಯಾಗಿ ಸಿಬಿಐ ಪರ ಹಾಜರಿದ್ದ ಪಿ.ಪ್ರಸನ್ನ ಕುಮಾರ್, ‘ಬಸವರಾಜ ಮುತ್ತಗಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ– 1973ರ (ಸಿಆರ್‌ಪಿಸಿ) ಕಲಂ 306ರ ಅಡಿಯಲ್ಲಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅನುಗುಣವಾಗಿ ಸೆಷನ್ಸ್‌ ನ್ಯಾಯಾಲಯ ಸಿಆರ್‌ಪಿಸಿ ಕಲಂ 164ರ ಅಡಿಯಲ್ಲಿ ಮಾಫಿ ಸಾಕ್ಷಿಯ ಹೇಳಿಕೆಯನ್ನು ದಾಖಲು ಮಾಡಿಕೊಳ್ಳುವಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ನಿರ್ದೇಶಿಸಿದೆ’ ಎಂದರು.

ಈ ಕ್ರಮಗಳ ಪರಿಪಾಲನೆಗೂ ಮುನ್ನ ಬಸವರಾಜ ಮುತ್ತಗಿ ಪ್ರಕರಣದ ತನಿಖಾಧಿಕಾರಿಗೆ ಈ ಸಂಬಂಧ ಪತ್ರಗಳನ್ನು ಬರೆದಿದ್ದು ಅದರಲ್ಲಿ ಹಲವು ಸತ್ಯಾಂಶಗಳನ್ನು ವಿವರಿಸಿದ್ದಾರೆ. ಹೀಗಾಗಿ, 164ರ ಹೇಳಿಕೆ ದಾಖಲೆಯಲ್ಲಿ ಯಾವುದೇ ಕಾನೂನು ಪಾಲನೆಯ ಲೋಪವಾಗಿಲ್ಲ ಎಂದು ವಿಶೇಷ ನ್ಯಾಯಾಲಯದ ಕ್ರಮಗಳನ್ನು ಬಲವಾಗಿ ಸಮರ್ಥಿಸಿದರು. ವಾದ– ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿರುವುದಾಗಿ ಪ್ರಕಟಿಸಿತು.

ಪ್ರಕರಣವೇನು?: ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್‌ 15ರಂದು ಯೋಗೀಶ್‌ಗೌಡ ಗೌಡರ್ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.