ADVERTISEMENT

ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ಯುವಕನ ಕುಟಂಬಕ್ಕೆ ಉಗ್ರ ಸಂಘಟನೆ ಬೆದರಿಕೆ?

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 18:49 IST
Last Updated 16 ಅಕ್ಟೋಬರ್ 2018, 18:49 IST
ವಿವೇಕ್‌
ವಿವೇಕ್‌   

ಕುಂದಾಪುರ: ಕೋಟೇಶ್ವರದ ಮಾರ್ಕೋಡು ನಿವಾಸಿ ಉದಯ್‌ ಎಂಬುವವರ ಪುತ್ರ ವಿವೇಕ್‌ (23) ತಮ್ಮ ಕುಟುಂಬಕ್ಕೆ ಉಗ್ರ ಸಂಘಟನೆಯಿಂದ ಅಪಾಯವಿದೆ ಎಂದು ಡೆತ್‌ನೋಟ್‌ ಬರೆದಿಟ್ಟು, ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿವೇಕ್‌ ಪದವಿ ಶಿಕ್ಷಣ ಪೂರೈಸಿದ್ದು, ಉಡುಪಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಡಾನ್ಸ್‌ ತರಗತಿ ನಡೆಸುತ್ತಿದ್ದರು. ಮೀನುಗಾರಿಕಾ ವೃತ್ತಿ ಮಾಡುತ್ತಿದ್ದ ತಂದೆ, ತಾಯಿ, ಅಜ್ಜಿ ಹಾಗೂ ಕಿರಿಯ ಸಹೋದರ ಅವರ ಜತೆಗೆ ಇದ್ದರು.

‘ಸೋಮವಾರ ಬೇರೆ ಕೆಲಸಕ್ಕೆ ಬೆಂಗಳೂರಿಗೆ ತೆರಳುವುದಾಗಿ ಮನೆಯಲ್ಲಿ ತಿಳಿಸಿದ್ದ. ಇದಕ್ಕಾಗಿ ಹೊಸ ಶೂ ಖರೀದಿ ಮಾಡಿದ್ದ. ಕೊಠಡಿಯಲ್ಲಿ ವಿಶ್ರಾಂತಿ ಪಡೆಯುವುದಾಗಿ ಬಾಗಿಲು ಹಾಕಿಕೊಂಡಿದ್ದ ಮಗ ಸಂಜೆ ಆದರೂ ಹೊರಗೆ ಬರದೆ ಇದ್ದಾಗ ಅನುಮಾನಗೊಂಡು ನೋಡಿದಾಗ ಸೀರೆಯಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ‘ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಡೆತ್‌ ನೋಟ್‌ನಲ್ಲಿ ಏನಿದೆ?

ನೇಣು ಹಾಕಿಕೊಳ್ಳುವ ಮೊದಲು ವಿವೇಕ್‌ ಬರೆದಿಟ್ಟಿರುವ ಡೆತ್‌ನೋಟ್‌ ಸಿಕ್ಕಿದೆ. ‘ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದ ಹಿಂದೆ ಉಗ್ರ ಸಂಘಟನೆ ಇದೆ. ಈ ಸಂಘಟನೆಯಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ಅಪಾಯ ಬರುವ ಸಾಧ್ಯತೆ ಇದ್ದ ಕಾರಣಕ್ಕೆ ಮನೆಯವರ ಜೀವ ಉಳಿಸಲು ಆತ್ಮಹತ್ಯೆ ಮಾಡಿಕೊಂಡಿದ್ದೇನೆ’ ಎಂದು ತಿಳಿಸಿದ್ದಾರೆ.

‘2 ವರ್ಷದ ಹಿಂದೆ ಆಕಸ್ಮಿಕವಾಗಿ ಪರಿಚಯವಾಗಿದ್ದ ಈ ಸಂಘಟನೆಗೆ ರಾಜಕೀಯ ಮುಖಂಡರ ಬೆಂಬಲವಿದೆ. ಮೊಬೈಲ್‌ ಬಳಸದೆ ಇರುವ ಈ ಸಂಘಟನೆಗೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿಯೂ ಅಸ್ತಿತ್ವವಿದೆ. ಇದರ ಚಟುವಟಿಕೆಗಳ ಕುರಿತು ಅನುಮಾನಗೊಂಡು ನಾನು ಕೆಲವಷ್ಟು ಮಾಹಿತಿ ಕಲೆ ಹಾಕಿದ್ದೆ. ಅದು ಅವರಿಗೆ ತಿಳಿದಾಗ ನನಗೆ ಕೊಲೆ ಬೆದರಿಕೆ ಹಾಕಿದರು. ನಾನು ಸಂಗ್ರಹಿಸಿದ ದಾಖಲೆ ಹಾಗೂ ಫೋಟೊಗಳನ್ನು ಪೊಲೀಸರಿಗೆ ಹಾಗೂ ಮಾಧ್ಯಮಕ್ಕೆ ನೀಡುವ ಆಲೋಚನೆ ಇತ್ತು. ಅಗಸ್ಟ್‌ ತಿಂಗಳಲ್ಲಿ ಈ ದಾಖಲೆ ಇರುವ ಮೊಬೈಲ್ ಕಳೆಯಿತು, ಹುಡುಕಿದರೂ ಸಿಕ್ಕಿರಲಿಲ್ಲ. ನನಗೆ ಸಾಕಷ್ಟು ಚಿತ್ರ ಹಿಂಸೆ ನೀಡಿದ್ದಾರೆ. ಅವರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರೂ ಅದು ಫಲಕಾರಿ ಆಗಿರಲಿಲ್ಲ'

‘ನನ್ನ ದೇಹ ದಾನ ಮಾಡಬೇಕೆಂಬ ಹಂಬಲವಿದ್ದು, ಮನೆಯವರು ಒಪ್ಪದಿದ್ದಲ್ಲಿ ಕಣ್ಣನ್ನಾದರೂ ದಾನ ಮಾಡಿ. ದೇಹವನ್ನು ಅಗ್ನಿಸ್ಪರ್ಶ ಮಾಡುವ ಬದಲು ಮನೆಯ ತೋಟದಲ್ಲಿ ಹೂಳಿರಿ, ಇದು ನನ್ನ ಕೊನೆಯ ಆಸೆ. ಜಾತಿ, ಹಣ, ಅಹಂಕಾರ, ರಾಜಕೀಯ, ಸ್ವಾರ್ಥ, ಅಧಿಕಾರ ಬಿಟ್ಟು ಎಲ್ಲರೂ ಮನುಷ್ಯರಾಗಿ ಬದುಕಿ. ದೇಶಕ್ಕಾಗಿ ಬಲಿಕೊಡಬೇಡಿ’ ಎನ್ನುವ ವಾಕ್ಯದೊಂದಿಗೆ ವಿವೇಕ್‌ ಡೆತ್ ನೋಟ್ ಅಂತ್ಯಗೊಳಿಸಿದ್ದಾರೆ.

ಅನುಮಾನಾಸ್ಪದ ಸಾವಿನ ಸಮಗ್ರ ತನಿಖೆಯನ್ನು ಸರ್ಕಾರ ನಡೆಸಬೇಕು. ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಹಲವು ಪ್ರಮುಖರು ಒತ್ತಾಯ ಮಾಡಿದ್ದಾರೆ.

ಡ್ರಗ್ಸ್‌ ದಂಧೆ ಉಲ್ಲೇಖ

ಸಾವಿಗೆ ಪರೋಕ್ಷವಾಗಿ ಕಾರಣವಾದ ಸಂಘಟನೆ ಚಟುವಟಿಕೆ ಕುರಿತು ಬರೆದಿರುವ ವಿವೇಕ್‌, ದೇವಾಲಯ ಲೂಟಿ, ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಡ್ರಗ್ಸ್‌ ಹಾಗೂ ಮಾದಕ ವಸ್ತುಗಳ ಪೂರೈಕೆ ಕುರಿತು ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಿದ್ದು, ಸಂಘಟನೆಗೆ ಸಂಬಂಧಿಸಿದ ವ್ಯಕ್ತಿಯೊಬ್ಬನ ಹೆಸರು ಉಲ್ಲೇಖ ಮಾಡಿರುವ ಕುರಿತು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.