ಸಮಾನ ದೃಷ್ಟಿಯ ನಾಯಕರಿರಲಿ
ಪರಿಸರ, ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಮಾಹಿತಿ ಇರುವ ವಿಚಾರವಂತ ನಾಯಕ ನಮಗೆ ಬೇಕು. ಬಡವರು ಹಾಗೂ ಮಧ್ಯಮ ವರ್ಗಗಳ ಬೆಳವಣಿಗೆಗೆ ಒತ್ತು ನೀಡುವವರು, ಉಚಿತ ಉಡುಗೊರೆಗಳ ಬದಲು ಉದ್ಯೋಗ ಸೃಷ್ಟಿಸಿ ಜನರ ಆರ್ಥಿಕ ಮತ್ತು ಆರೋಗ್ಯದ ಹಿ ತದೃಷ್ಟಿಯಿಂದ ಕೆಲಸ ಮಾಡುವವರು ಬೇಕು. ಭ್ರಷ್ಟ, ಸ್ವಾರ್ಥ ಹಾಗೂ ಜಾತಿ ರಾಜಕಾರಣ ಮಾಡದೇ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುವವರಾಗಿರಬೇಕು. ಕಲೆ, ಕ್ರೀಡೆ, ಶಿಕ್ಷಣ, ಸಂಸ್ಕೃತಿ, ಭಾಷೆ ಮತ್ತು ಮಹಿಳೆಯರ ಶಿಕ್ಷಣ ಹಾಗೂ ಸಬಲೀಕರಣಕ್ಕೆ ಪುಷ್ಠಿ ನೀಡುವ ಜನಪ್ರತಿನಿಧಿಗಳು ಬೇಕು.
ರಕ್ಷಿತಾ ಎಸ್.ಎನ್, ದೇವರಾಜ್ ಅರಸು ನಗರ, ಸಾಗರ
***
ಸಾಮಾನ್ಯ ಪ್ರಜೆಗೂ ಅವಕಾಶವಿರಲಿ
ಪ್ರಚಲಿತ ರಾಜಕೀಯದ ಬೆಳವಣಿಗೆಗಳನ್ನು ಗಮನಿಸಿದರೆ ನೈಜ ಪ್ರಜಾಪ್ರಭುತ್ವ ಉಳಿದಿದೆಯೇ ಎನಿಸುತ್ತದೆ. ನಮ್ಮ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದ್ದರೂ, ರಾಜಕೀಯ ಅವಕಾಶ ಪಡೆಯುವವರು ಕೆಲವೇ ವರ್ಗಗಳು.
ಜನರನ್ನು ಮೂರ್ಖರನ್ನಾಗಿ ಮಾಡುವ ಈ ವಂಶರಾಜಕಾರಣಕ್ಕೆ ತಿಲಾಂಜಲಿ ಹೇಳಿ ವಿದ್ಯಾವಂತ, ಉತ್ತಮ ಗುಣಗಳ ಕ್ರಿಯಾಶೀಲ ಯುವಕರನ್ನು ರಾಜಕಾರಣಕ್ಕೆ ಕರೆತರುವ ಕೆಲಸ ಎಲ್ಲ ರಾಜಕೀಯ ಪಕ್ಷಗಳು ಮಾಡಬೇಕು. ಸಮಾಜಮುಖಿಯಾದ ಒಬ್ಬ ಸಾಮಾನ್ಯ ಪ್ರಜೆ ಚುನಾವಣಾ ಅಭ್ಯರ್ಥಿಯಾಗಲು ಮುಂದಾದರೆ ಜನರು ಸ್ವಾಗತಿಸಬೇಕು. ಅದಕ್ಕಾಗಿ ಜನರ ಮನಸ್ಥಿತಿ ಮೊದಲು ಬದಲಾಗಬೇಕು.
‘ಅಜ್ಜ ಹಳೆಯ ಆಲದ ಮರಕ್ಕೆ ನೇಣುಹಾಕೊಂಡಿದ್ದ ಅದಕ್ಕೆ ನಾನೂ ನೇಣು ಹಾಕಿಕೊಳ್ಳಬೇಕು’ ಎಂಬ ಮೂರ್ಖತನ ಬಿಡಬೇಕು. ನಮ್ಮ ಅಜ್ಜಂದಿರನ್ನು ಮೋಸ, ಭ್ರಷ್ಟಾಚಾರದ ಹೆಸರಿನಲ್ಲಿ ನೇಣಿನ ಕುಣಿಕೆಗೆ ದೂಡಿದ ರಾಜಕಾರಣ ಮುಂದೆ ನಮ್ಮನ್ನೂ ಅದೇ ದಾರಿಗೆ ನೂಕುತ್ತದೆ ಎಂಬ ಅರಿವು ಇರಬೇಕು. ಜನರು ಬದಲಾದರೆ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ. ಜಾತಿ, ಹಣ, ಕುಟುಂಬ ರಾಜಕಾರಣ ಧಿಕ್ಕರಿಸಿ, ಉತ್ತಮ ಗುಣವಿರುವ ಸಾಮಾನ್ಯ ಯುವ ನಾಯಕರನ್ನು ಎಲ್ಲರೂ ಆರಿಸೋಣ.
–ಸುನೀತಾ ಪಿ.ಎಸ್. ವಿಜಯಪ್ರಸಾದ, ಆನವಟ್ಟಿ,ಸೊರಬ.
***
ನಿರಾಸಕ್ತಿ ಏಕೆ?
ರಾಜಕೀಯ ಈಗ ಉದ್ಯಮವಾಗಿ ಬದಲಾಗಿದೆ. ರಾಜಕಾರಣಿಗಳ ಮುಖವಾಡ ಹೊತ್ತ ಬಂಡವಾಳಶಾಹಿಗಳು ಬಂಡವಾಳ ಹೂಡಿ ಲಾಭ ಗಳಿಸುವ ಉಮೇದಿನಲ್ಲಿದ್ದಾರೆ. ಉದ್ಯಮಿಗಳ ಮಕ್ಕಳು ಉದ್ಯಮಿಗಳಾಗುವಂತೆ, ರಾಜಕಾರಣಿಗಳ ಮಕ್ಕಳೇ ರಾಜಕಾರಣಿಗಳಾಗುತ್ತಿದ್ದಾರೆ. ಜನರ ಸೇವೆ ಚುನಾವಣಾ ಭಾಷಣಕ್ಕೆ ಸೀಮಿತವಾಗುತ್ತಿದೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಯುವ ಸಮೂಹ ಚುನಾವಣೆ, ರಾಜಕಾರಣದ ಬಗ್ಗೆ ಮುಜುಗರ ಪಡುತ್ತಿದೆ.
ಚುನಾವಣಾ ಸಂದರ್ಭದಲ್ಲಿ ಜನಪ್ರತಿನಿಧಿಗಳು ನೀಡುವ ಭರವಸೆಗಳು, ಟೀಕೆ–ಟಿಪ್ಪಣಿಗಳು ವಿದ್ಯಾವಂತ ಯುವ ಸಮುದಾಯದಲ್ಲಿ ಬೇಸರ ಹುಟ್ಟಿಸಿದೆ. ಅವರು ಬೊಗಳೆ ಮಾತುಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಈ ಬೆಳವಣಿಗೆಗಳು ಚುನಾವಣೆ ಬಗ್ಗೆ ಯುವಜನರಲ್ಲಿ ನಿರಾಸಕ್ತಿ ಉಂಟು ಮಾಡಿದೆ.
ಪಿ. ಪ್ರೇಮ್ ಕುಮಾರ್, ಕಣ್ಣೂರು, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ
***
ಯುವಜನತೆ ಕರ್ತವ್ಯ ನಿಭಾಯಿಸಲಿ
ಈಚಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆ ಸರಿ ಇಲ್ಲದ ಕಾರಣ ಯುವಜನತೆ ಮತ ಚಲಾಯಿಸಲು ನಿರಾಸಕ್ತಿ ತೋರುತ್ತಿದ್ದಾರೆ. ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಅದು ಯುವಜನತೆಯಿಂದ ಮಾತ್ರ ಸಾಧ್ಯ. ಯುವ ಜನತೆ ಮನಸ್ಸು ಮಾಡಿದರೆ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ದೇಶದ ಬಲಾವಣೆಗೆ ಕಾರಣವಾಗಬಹುದು. ಹಾಗಾಗಿ ಈ ಸಲ ನಾನು ಒಂದು ನಿರ್ದಿಷ್ಟ ಪಕ್ಷ ಅಂತ ಅಲ್ಲ, ಜನರಿಗೆ ಹಾಗೂ ಯುವಜನತೆಗೆ ಒಳ್ಳೆಯ ಕಾರ್ಯವನ್ನು ಮಾಡುವ ಜನನಾಯಕನಿಗೆ ಮತ ಚಲಾಯಿಸುತ್ತೇನೆ. ನನ್ನ ಕರ್ತವ್ಯ ನಿಭಾಯಿಸುತ್ತೇನೆ. ಯುವಜನತೆ ನನ್ನಂತೆ ತಮ್ಮ ಕರ್ತವ್ಯ ನಿಭಾಯಿಸಲಿ.
ಯುಕ್ತಾ, ವಿದ್ಯಾರ್ಥಿನಿ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು
***
ಜೈಕಾರ ಹಾಕಲು ಸೀಮಿತ
ಇಂದಿನ ಬಹುತೇಕ ಯುವ ಜನತೆ ಶಿಕ್ಷಣ, ಉದ್ಯೋಗದ ಬೆನ್ನು ಹತ್ತಿದ್ದಾರೆ. ಕೆಲವರು ಚುನಾವಣೆಯ ಕಡೆ ಗಮನ ಹರಿಸಿದರೂ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ. ಹೀಗಾಗಿ, ಯುವ ಸಮೂಹ ಕೇವಲ ರಾಜಕೀಯ ಪಕ್ಷಗಳ ಪರವಾಗಿ ಘೋಷಣೆ ಕೂಗಲು, ಮುಖಂಡರಿಗೆ ಜೈಕಾರ ಹಾಕಲು ಸೀಮಿತವಾಗಿದ್ದಾರೆ. ಚುನಾವಣೆ ಮತ್ತು ರಾಜಕೀಯದ ಬಗ್ಗೆ ಅರಿತು, ಸಕ್ರಿಯವಾಗಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲಾ ಪಕ್ಷಗಳಿಂದ ಯುವ ಜನತೆಗೆ ಆದ್ಯತೆ ನೀಡಬೇಕು. ಯಾವುದೇ ರಾಜಕೀಯದ ಹಿನ್ನೆಲೆ ಇಲ್ಲದವರನ್ನು ಪರಿಗಣಿಸಬೇಕು.
ಎಸ್. ಕಮಲ, ತುಮಕೂರು.
***
ವ್ಯವಸ್ಥೆಗೆ ಮಗ್ಗಲು ಮುಳ್ಳು
ರಾಜಕೀಯ ಕ್ಷೇತ್ರ ಇರುವುದು ಹಿರಿತಲೆಗಳಿಗೆ, ಕುಟುಂಬ ರಾಜಕಾರಣಕ್ಕೆ, ಆಯ್ಕೆಯಾದ ವ್ಯಕ್ತಿಯ ಮರುಆಯ್ಕೆಗೆ ಹಾಗೂ ಹಣವಿದ್ದವರಿಗೆ ಮಾತ್ರ ಎನ್ನುವಂತಾಗಿದೆ. ಯುವಕರಿಗೆ ಅಲ್ಲಿ ಅವಕಾಶ ನಿಷಿದ್ಧ ಎನ್ನುವ ಅಘೋಷಿತ ನಿಯಮ ಜಾರಿಗೆ ಬಂದಂತಿದೆ. ಯುವಕರೇ ಹೆಚ್ಚಿರುವ ಭಾರತದಲ್ಲಿ ಯುವ ಜನಪ್ರತಿನಿಧಿಗಳ ಸಂಖ್ಯೆ ಕಡಿಮೆಯಿರುವುದು ವಿಪರ್ಯಾಸ.
ಇಂದಿನ ರಾಜಕಾರಣಿಗಳು ಅಭಿವೃದ್ಧಿ ವಿಷಯದಲ್ಲಿ ಕಚ್ಚಾಡುವುದನ್ನು ಬಿಟ್ಟು, ವೈಯಕ್ತಿಕ ವಿಷಯ ಮುಂದಿಟ್ಟುಕೊಂಡು ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿದ್ದಾರೆ. ಪಕ್ಷಗಳೂ ಹಣ ಇದ್ದವ ರಿಗಷ್ಟೇ ಟಿಕೆಟ್ ನೀಡುತ್ತಿರುವುದು ಆತಂಕದ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಬೇಕೆಂದರೆ, ನಿಸ್ವಾರ್ಥ ಮನೋಭಾವದ ಯುವಕರು ಮುಂದೆ ಬರಬೇಕು. ಪಕ್ಷಗಳು ಅವರಿಗೆ ಟಿಕೆಟ್ ನೀಡಿ ಬೆನ್ನೆಲುಬಾಗಿ ನಿಲ್ಲಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರ, ಪ್ರಜಾತಂತ್ರ ವ್ಯವಸ್ಥೆಯ ಮಗ್ಗಲು ಮುಳ್ಳಾಗಲಿದೆ.
-ಡಿ.ಆರ್.ರಮ್ಯಾ,ವಿದ್ಯಾರ್ಥಿನಿ, ವಿದ್ಯಾನಗರ, ಹುಬ್ಬಳ್ಳಿ
***
ಭ್ರಷ್ಟಾಚಾರದಿಂದ ಹಿಂಜರಿಕೆ
ಹೆಚ್ಚಿನ ಯುವ ಜನತೆಗೆ ರಾಜಕೀಯ, ಚುನಾವಣೆಯ ಅರಿವಿಲ್ಲ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರೂ, ಕೇವಲ ಪುಸ್ತಕದ ಹುಳು ಆಗುತ್ತಿದ್ದಾರೆ. ಭ್ರಷ್ಟ ವ್ಯವಸ್ಥೆ ಕಂಡು ರಾಜಕಾರಣದಲ್ಲಿ ಭಾಗಿಯಾಗಲು ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಎಲ್ಲಾ ಸವಾಲುಗಳನ್ನು ಎದುರಿಸಿ ಮುಂದೆ ಬಂದ ಆಸಕ್ತರಿಗೆ ಕುಟುಂಬ ರಾಜಕಾರಣದಿಂದ ಅವಕಾಶಗಳೇ ಸಿಗುತ್ತಿಲ್ಲ.
ಅಭಿಷೇಕ್, ತುಮಕೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.