ಬೆಂಗಳೂರು: 'ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಂತೆ ಐದು ಗ್ಯಾರಂಟಿಗಳನ್ನೂ ಜಾರಿ ಮಾಡುತ್ತಿದ್ದೇವೆ. ಇದರಿಂದ ಸರ್ಕಾರ ದಿವಾಳಿಯಾಗಿಲ್ಲ. ಜನರಿಗೆ ಆರ್ಥಿಕ ಶಕ್ತಿ ಬಂದಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ‘ಯುವನಿಧಿ’ ಫಲಾನುಭವಿಗಳ ನೋಂದಣಿಗೆ ಚಾಲನೆ ನೀಡಿ ಮಾತನಾಡಿದರು.
‘ಕೊಟ್ಟ ಮಾತಿನಂತೆ ಯುವನಿಧಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸುತ್ತಿದೆ. 5.29 ಲಕ್ಷ ಯುವಕ, ಯುವತಿಯರಿಗೆ ಪ್ರಸಕ್ತ ವರ್ಷ ನಿರುದ್ಯೋಗ ಭತ್ಯೆ ನೀಡಲಾಗುವುದು. ಜನವರಿ 12ರಂದು ಶಿವಮೊಗ್ಗದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು’ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, 'ಐದು ಗ್ಯಾರಂಟಿಗಳ ಅನುಷ್ಠಾನದ ಮೂಲಕ ನಮ್ಮ ಸರ್ಕಾರ ಜನರಿಗೆ ಬಲ ತುಂಬಿದೆ. ಕಷ್ಟ ಕಾಲದಲ್ಲಿ ನೆರವಾದವರನ್ನು ಮರೆಯಬೇಡಿ' ಎಂದು ಸಭೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಹೇಳಿದರು.
ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿವರಾದ ಡಾ.ಎಂ.ಸಿ. ಸುಧಾಕರ್, ಪ್ರಿಯಾಂಕ್ ಖರ್ಗೆ, ಬಿ. ನಾಗೇಂದ್ರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.