ಚನ್ನಪಟ್ಟಣ (ರಾಮನಗರ): ‘ಪ್ರಚಾರದ ವೇಳೆ ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡರ ಮತ್ತು ಎಚ್.ಡಿ. ಕುಮಾರಸ್ವಾಮಿ ಬಗ್ಗೆ ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಆಡಿದ ಮಾತಿನಿಂದ ಚುನಾವಣೆಯಲ್ಲಿ ನನಗೆ ಲಾಭ ಮತ್ತು ನಷ್ಟ ಎರಡೂ ಆಗಿದೆ. ಆದರೆ, ವೈಯಕ್ತಿಕವಾಗಿ ಜಮೀರ್ ಮಾತು ಖಂಡಿಸುವೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
‘ಜಮೀರ್ ಮಾತು ಮುಸ್ಲಿಮರ ಮತಗಳನ್ನು ಕ್ರೋಡೀಕರಿಸಿದರೆ, ಮತ್ತೊಂದೆಡೆ ಒಕ್ಕಲಿಗ ಸಮುದಾಯದ ಮತಗಳ ಮೇಲೆ ಪರಿಣಾಮ ಬೀರಿದೆ. ಮತದಾನದ ಬಳಿಕ ಈ ವಿಷಯವನ್ನು ಪಕ್ಷದ ಮುಖಂಡರು ಮತ್ತು ಬೆಂಬಲಿಗರು ನನ್ನ ಗಮನಕ್ಕೆ ತಂದಿದ್ದಾರೆ’ ಎಂದರು.
ಚುನಾವಣೆ ಬಳಿಕ ಮಾಧ್ಯಮಗಳ ಜತೆ ಗುರುವಾರ ಮಾತನಾಡಿದ ಅವರು, ‘ರಾಜ್ಯ ರಾಜಕೀಯದಲ್ಲಿ ಒಕ್ಕಲಿಗರ ನಾಯಕರಾಗಿರುವ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ನಿಂದಿಸಿದರೆ ಸಮುದಾಯ ಸಹಿಸದು. ಒಂದು ವೇಳೆ ಇಬ್ಬರ ಬಗ್ಗೆ ಜಮೀರ್ ಆಡಿದ ಮಾತನ್ನು ಸಮುದಾಯ ಗಂಭೀರವಾಗಿ ಪರಿಗಣಿಸಿ ದ್ದರೆ ಜೆಡಿಎಸ್ ಪರ ಒಕ್ಕಲಿಗ ಮತಗಳು ಕ್ರೋಡೀಕರಣವಾಗಿರುವ ಸಾಧ್ಯತೆ ಇದೆ’ ಎಂದು ವಿಶ್ಲೇಷಿಸಿದರು.
‘ನನ್ನ ರಾಜಕೀಯ ಜೀವನದ ದೊಡ್ಡ ಚುನಾವಣೆ ಇದಾಗಿದ್ದು, ಇಷ್ಟೊಂದು ತೀವ್ರತೆ ಪಡೆಯುತ್ತದೆ ಅಂದುಕೊಂಡಿರ ಲಿಲ್ಲ. ಕ್ಷೇತ್ರದಲ್ಲಿ ಸಮಬಲದ ಪೈಪೋಟಿ ಇದ್ದು, ಇಬ್ಬರಲ್ಲಿ ಯಾರೇ ಗೆದ್ದರೂ ಕೂದ ಲೆಳೆಯ ಅಂತರದಲ್ಲಿ ಮಾತ್ರ’ ಎಂದರು.
‘ಕೇಂದ್ರ ಸಚಿವ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಕ್ಷೇತ್ರವನ್ನು ತಮ್ಮ ಕುಟುಂಬದ ಹಿಡಿತದಲ್ಲಿಯೇ ಉಳಿಸಿಕೊಳ್ಳಲು ಅವರು ಹೋರಾಡಿದರು. ದೇವೇಗೌಡ ತಮ್ಮ ಮೊಮ್ಮಗನನ್ನು ಗೆಲ್ಲಿಸಲು ಶಪಥ ಮಾಡಿದ್ದರು. ಒಕ್ಕಲಿಗ ಸಮುದಾಯದ ಮುಖದಂತಿರುವ ಜೆಡಿಎಸ್, ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೊಂದಿದೆ. ಬಿಜೆಪಿ ಜೊತೆಗಿನ ಮೈತ್ರಿಯೂ ಅವರಿಗೆ ನೆರವಾಗಿರಬಹುದು’ ಎಂದು ಅಭಿಪ್ರಾಯಪಟ್ಟರು.
‘ನಾನು ಎದುರಿಸಿರುವ ಎಲ್ಲಾ ಚುನಾವಣೆಗಳಲ್ಲೂ 80 ರಿಂದ 90 ಸಾವಿರ ಮತ ಪಡೆದಿದ್ದೇನೆ. ಈ ಚುನಾವಣೆಯಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಮತ ಪಡೆದರೆ ಗೆಲುವು ನಿಶ್ಚಿತ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 15 ಸಾವಿರ ಮತ ಪಡೆದಿತ್ತು. ಈ ಚುನಾವಣೆಯ ಮತ ಲೆಕ್ಕಾಚಾರದಿಂದ ನಾನು ಹತಾಶನಾಗಿಲ್ಲ. ಆದರೆ, ವಾಸ್ತವವನ್ನು ಒಪ್ಪಿಕೊಳ್ಳುತ್ತಲೇ ಸಮಬಲದ ಹೋರಾಟದಲ್ಲಿ ಗೆಲ್ಲುತ್ತೇನೆಂಬ ವಿಶ್ವಾಸ ಹೊಂದಿದ್ದೇನೆ’ ಎಂದು ಯೋಗೇಶ್ವರ್ ಹೇಳಿದರು.
‘ಬಿಜೆಪಿಯಲ್ಲಿದ್ದಾಗ ನನಗಿದ್ದ ಮತಬ್ಯಾಂಕ್, ಕಾಂಗ್ರೆಸ್ ಸೇರಿದ ಬಳಿಕವೂ ನನ್ನನ್ನು ಹಿಂಬಾಲಿಸುವುದೇ ಎಂಬುದು ಫಲಿತಾಂಶ ಬಂದ ಬಳಿಕವೇ ಗೊತ್ತಾಗಲಿದೆ’ ಎಂದರು.
‘ಐಪಿಎಲ್‌ನಂತಾದ ರಾಜಕೀಯ ಬದುಕು’
‘ನನ್ನ ರಾಜಕೀಯ ಜೀವನ ಐಪಿಎಲ್‌ನಂತಾಗಿದೆ. ಆಟಗಾರರು ಒಂದೊಂದು ಸೀಸನ್‌ನಲ್ಲೂ ಒಂದೊಂದು ತಂಡದಲ್ಲಿ ಆಡುವಂತೆ ಪ್ರತಿ ಚುನಾವಣೆಯಲ್ಲಿ ನಾನು ಒಂದೊಂದು ಪಕ್ಷದಿಂದ ಸ್ಪರ್ಧಿಸುತ್ತಾ ಬಂದಿದ್ದೇನೆ’ ಎಂದು ಯೋಗೇಶ್ವರ್ ತಮ್ಮ ರಾಜಕೀಯ ನಡೆಯನ್ನು ವಿಶ್ಲೇಷಿಸಿದ್ದಾರೆ.
‘ಕ್ಷೇತ್ರದಲ್ಲಿ ನಾನು ಕಟ್ಟಿ ಬೆಳೆಸಿದ ಬಿಜೆಪಿಯನ್ನು ಕಡೆ ಗಳಿಗೆಯಲ್ಲಿ ಬಿಟ್ಟು ಕಾಂಗ್ರೆಸ್ ಸೇರುವ ಅನಿವಾರ್ಯ ಪರಿಸ್ಥಿತಿ ಬಂತು. ಆರು ತಿಂಗಳ ಹಿಂದೆ ಒಂದಾಗಿದ್ದವರು ಉಪ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದೇವೆ. ಹಿಂದೆ ನಾನು ಕಾಂಗ್ರೆಸ್‌ನಿಂದ ಗೆದ್ದ ಬಳಿಕ ಕ್ಷೇತ್ರದಲ್ಲಿ ಪಕ್ಷಕ್ಕೆ ಅಸ್ತಿತ್ವವಿರಲಿಲ್ಲ. ಇದೀಗ ಕಡಿಮೆ ಸಮಯದಲ್ಲಿ ಸಂಘಟಿಸಿ ಚುನಾವಣೆ ಎದುರಿಸಿದ್ದೇನೆ. ಆದರೂ, ಅಲ್ಲಲ್ಲಿ ಹೊಂದಾಣಿಕೆ ಸಮಸ್ಯೆಯಾಗಿದೆ‘ ಎಂದರು.
ಮತದಾರ ಈಗಾಗಲೇ ಉತ್ತರ ಕೊಟ್ಟಿದ್ದಾನೆ: ನಿಖಿಲ್ ಕುಮಾರಸ್ವಾಮಿ
‘ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನನ್ನ ತಾತ ಎಚ್.ಡಿ. ದೇವೇಗೌಡ ಮತ್ತು ತಂದೆ ಎಚ್.ಡಿ. ಕುಮಾರಸ್ವಾಮಿ ಕುರಿತು ಆಡಿರುವ ಮಾತುಗಳಿಗೆ ಮತದಾರರು ಈಗಾಗಲೇ ಉತ್ತರ ಕೊಟ್ಟಿದ್ದಾರೆ’ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
‘ಜನ ಏನು ತೀರ್ಪು ಕೊಟ್ಟಿದ್ದಾರೆ ಎಂಬುದನ್ನು ನವೆಂಬರ್ 23ರಂದು ಹೊರಬೀಳುವ ಫಲಿತಾಂಶದವರೆಗೆ ಕಾದು ನೋಡಬೇಕಿದೆ. ನನ್ನ ಹಣೆಬರಹ ಬರೆಯುವುದು ಚನ್ನಪಟ್ಟಣದ ಮತದಾರರೇ ಹೊರತು, ಬೇರೆ ಯಾರೋ ಅಲ್ಲ ಎಂಬುದು ಗೊತ್ತಾಗುತ್ತದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.