ADVERTISEMENT

ಅನಾವಶ್ಯಕ ಹೇಳಿಕೆ ನಿಲ್ಲಿಸಿ: ಜಮೀರ್‌ಗೆ ಹೈಕಮಾಂಡ್‌ ಎಚ್ಚರಿಕೆ

ಸುರ್ಜೇವಾಲಾ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 19:47 IST
Last Updated 25 ಜುಲೈ 2022, 19:47 IST
   

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯನ್ನು ‘ಸಾಮೂಹಿಕ ನಾಯಕತ್ವ‘ದಲ್ಲಿ ಎದುರಿಸಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದ ಬಳಿಕವೂ, ‘ಸಿದ್ದರಾಮಯ್ಯ ಅವರೇ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎನ್ನುವುದು ಜನರ ಆಸೆ. ರಾಜ್ಯಕ್ಕೆ ಅವರ ಅಗತ್ಯವಿದೆ’ ಎಂದು ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಶಾಸಕ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಸೋಮವಾರ ಎಚ್ಚರಿಕೆ ನೀಡಿದೆ.

‘ನೀವು ಪಕ್ಷದ ಶಿಸ್ತು ಮತ್ತು ಸಿದ್ಧಾಂತದ ‘ಲಕ್ಷ್ಮಣ ರೇಖೆ’ ಮೀರಿದ್ದೀರಿ. ‌ಮುಂದಿನ ದಿನಗಳಲ್ಲಿ ಬಹಿರಂಗ ಹೇಳಿಕೆಗಳನ್ನು ನೀಡುವಾಗ ಎಚ್ಚರದಿಂದಿರಿ. ಪಕ್ಷದ ಶಿಸ್ತು ಮತ್ತು ಸಿದ್ಧಾಂತಕ್ಕೆ ಬದ್ಧರಾಗಿರಿ’ ಎಂದುಜಮೀರ್‌ಗೆ ಪಕ್ಷದ ರಾಜ್ಯ ಉಸ್ತುವಾರಿಯೂ ಆಗಿರುವ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಪತ್ರದ ಮೂಲಕ ತಾಕೀತು ಮಾಡಿದ್ದಾರೆ.

ಪತ್ರದಲ್ಲಿ ಸುರ್ಜೇವಾಲಾ, ‘ನಿಮ್ಮ ಇತ್ತೀಚಿನ ಬಹಿರಂಗ ಹೇಳಿಕೆಗಳು ಅನಾವಶ್ಯಕ ಮತ್ತು ಕೆಟ್ಟ ಅಭಿರುಚಿಯಿಂದ ಕೂಡಿದೆ. ಅನುಭವಿ ನಾಯಕರಿಂದ ಇಂತಹ ಹೇಳಿಕೆಗಳು ನಿರೀಕ್ಷಿತವಲ್ಲ. ಅನಾವಶ್ಯಕ ಮತ್ತು ಸಂಕುಚಿತ ಸ್ವಭಾವದ ಹೇಳಿಕೆಗಳು ವಿವಾದಕ್ಕೆ ಮತ್ತು ಕಹಿ ವಾತಾವರಣಕ್ಕೆ ಕಾರಣವಾಗುತ್ತದೆ. ಅಲ್ಲದೆ, ಅನಗತ್ಯವಾದ ಹೇಳಿಕೆಗಳು ತಪ್ಪು ಸಂದೇಶವನ್ನು ನೀಡುತ್ತದೆ’ ಎಂದೂ ಹೇಳಿದ್ದಾರೆ. ಆ ಮೂಲಕ, ಬಹಿರಂಗ ಹೇಳಿಕೆಗಳನ್ನು ನೀಡದಂತೆ ಸೂಚಿಸಿದ್ದಾರೆ.

ADVERTISEMENT

ಚುನಾವಣೆ ಹೊಸ್ತಿಲಲ್ಲಿರುವಾಗಲೇ ಮುಖ್ಯಮಂತ್ರಿ ಗಾದಿ ವಿಚಾರದಲ್ಲಿ ಸಿದ್ದರಾಮಯ್ಯ ಪರ ಜಮೀರ್‌ ನೀಡುತ್ತಿರುವ ಹೇಳಿಕೆಗಳಿಂದ ಪಕ್ಷದಲ್ಲಿ ಬಣ ರಾಜಕೀಯ ತೀವ್ರಗೊಳ್ಳುವ ಮುನ್ಸೂಚನೆ ಸಿಗುತ್ತಿದ್ದಂತೆ, ಕಾಂಗ್ರೆಸ್‌ ಹೈಕಮಾಂಡ್‌ ಎಚ್ಚೆತ್ತುಕೊಂಡು, ಈ ಎಚ್ಚರಿಕೆ ನೀಡಿದೆ.

ತಮ್ಮ ಸ್ವ ಕ್ಷೇತ್ರ ಚಾಮರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮಗಳು ಸೇರಿದಂತೆ, ಸಂದರ್ಭ ಸಿಕ್ಕಾಗಲೆಲ್ಲ ‘ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ’ ಎಂದು ಜಮೀರ್‌ ಬಹಿರಂಗವಾಗಿ ಹೇಳುತ್ತಲೇ ಬಂದಿರುವುದು ಕಾಂಗ್ರೆಸ್‌ನ ರಾಜ್ಯ ಘಟಕದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಒಕ್ಕಲಿಗರ ಸಭೆಯಲ್ಲಿ ಇತ್ತೀಚೆಗೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಎಲ್ಲರಿಗೂ ಅವಕಾಶ ನೀಡಿದ್ದೀರಿ, ನನಗೂ ಒಂದು ಅವಕಾಶ ನೀಡಿ’ ಎಂದಿದ್ದರು. ಶಿವಕುಮಾರ್‌ ಅವರ ಈ ಮಾತಿಗೆ ತಿರುಗೇಟು ಎಂಬಂತೆ ಮಾತನಾಡಿದ್ದ ಜಮೀರ್‌, ‘ಸಿದ್ದರಾಮಯ್ಯ ಅವರೇ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎನ್ನುವುದು ಜನರ ಆಸೆ’ ಎಂದಿದ್ದರು.

‘ಒಂದೇ ಸಮುದಾಯ ನಂಬಿ ಕೊಂಡು ಯಾರೂ ಮುಖ್ಯ ಮಂತ್ರಿ ಆಗಲು ಸಾಧ್ಯವಿಲ್ಲ. ಮುಖ್ಯ ಮಂತ್ರಿ ಆಗುವ ಆಸೆ ನನಗೂ ಇದೆ ಸಮುದಾಯದ ಆಧಾರದಲ್ಲಿ ಮುಖ್ಯಮಂತ್ರಿ ಸ್ಥಾನ ನೀಡುವುದಾದರೆ ನಾನೂ ಒಬ್ಬ ಆಕಾಂಕ್ಷಿ.ಒಕ್ಕಲಿಗ ಸಮುದಾಯಕ್ಕಿಂತ ನಮ್ಮ ಸಮುದಾಯ ದೊಡ್ಡದಿದೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.