ಹೊಸಕೋಟೆ: ಪ್ರಪಂಚದ 36 ಮುಸ್ಲಿಂ ದೇಶಗಳು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮೆಚ್ಚಿವೆ. ಪಾಕಿಸ್ತಾನವೂ ಒಪ್ಪಿರುವಾಗ ನಾವು ವಿರೋಧಿಸುವುದು ಸರಿಯಲ್ಲ ಎಂದು ಬಿಜೆಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಅಜಿಮ್ ಹೇಳಿದ್ದಾರೆ.
ಹೊಸಕೋಟೆಯಲ್ಲಿ ಮಾತನಾಡಿದ ಅವರು,ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಅಲ್ಪಸಂಖ್ಯಾತರು ಬೆಂಬಲ ನೀಡಲಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ವೀರಪ್ಪ ಮೊಯಿಲಿ ಅವರನ್ನು ಕ್ಷೇತ್ರದ ಜನರು ಮನೆಗೆ ಕಳುಹಿಸಲಿದ್ದಾರೆ ಎಂದು ಟೀಕಿಸಿದರು.
ಬಚ್ಚೇಗೌಡ ಸ್ಥಳೀಯ ಅಭ್ಯರ್ಥಿ. ಅವರಿಗೆ ಜನರ ನಾಡಿಮಿಡಿತ ತಿಳಿದಿದೆ. 5 ಬಾರಿ ಶಾಸಕರಾಗಿ, 2ಬಾರಿ ಸಚಿವರಾಗಿ ಕೆಲಸ ಮಾಡಿರುವ ಅನುಭವವಿದೆ. ವೃತ್ತಿಯಲ್ಲಿ ವಕೀಲರಾಗಿದ್ದು ಕಾನೂನಿನ ಅರಿವಿದೆ. ಅವರಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಕಳೆದ ಐದು ವರ್ಷದಲ್ಲಿ ದೇಶದ ಯಾವುದೇ ಭಾಗದಲ್ಲಿ ಮತೀಯ ಗಲಭೆಗಳು ನಡೆದಿಲ್ಲ. ಕಳೆದ 70 ವರ್ಷದಿಂದ ಮುಸ್ಲಿಮರಿಗೆ ಕಾಂಗ್ರೆಸ್ ಅನ್ಯಾಯ ಮಾಡುತ್ತಲೇ ಬಂದಿದೆ ಎಂದು ದೂರಿದರು.
ಪ್ರಪಂಚದ 36 ಮುಸ್ಲಿಂ ದೇಶಗಳು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮೆಚ್ಚಿವೆ. ಪಾಕಿಸ್ತಾನವೂ ಒಪ್ಪಿರುವಾಗ ನಾವು ವಿರೋಧಿಸುವುದು ಸರಿ ಇಲ್ಲ ಎಂದರು.
ಬಿಜೆಪಿಗೆ ಮತ ಹಾಕುವವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಲ್ಲ ಎಂದು ಸಚಿವ ಜಮೀರ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಫತ್ವಾ ಹೊರಡಿಸುವ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.