ಮಧುಗಿರಿ: ಪಟ್ಟಣದ ಹೃದಯ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಸೋಮವಾರ 21ನೇ ವೈಕುಂಠ ಏಕಾದಶಿ ಅಂಗವಾಗಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿವೆ.
ದೇವಾಲಯದಲ್ಲಿ ಪ್ರತಿಷ್ಠಾಪಿತಗೊಂಡಿರುವ ವೆಂಕಟರಮಣ ಸ್ವಾಮಿಯ ವಿಗ್ರಹ ಕೃಷ್ಣ ಶಿಲೆಯಿಂದ ಕೂಡಿದೆ. ಈಗಿನ ಸೀಮಾಂಧ್ರ ಪ್ರದೇಶದ ಮಡಕಶಿರಾ ಕೆರೆಯಲ್ಲಿ ವೆಂಕಟರಮಣ ಸ್ವಾಮಿಯ ವಿಗ್ರಹ ದೊರೆತಿದ್ದು, ಸಪ್ಪೇಗೌಡನ ಕನಸಿನಲ್ಲಿ ದೇವರು ಕಾಣಿಸಿಕೊಂಡು ಕೆರೆಯ ನೀರಿನಲ್ಲಿರುವ ನನ್ನ ವಿಗ್ರಹವನ್ನು ತೆಗೆದುಕೊಂಡು ಹೋಗಿ ಮಧುಗಿರಿಯಲ್ಲಿ ಪ್ರತಿಷ್ಠಾಪಿಸು ಎಂದು ಆದೇಶವಾಗಿತ್ತು.ಅದರಂತೆ 1,690ರಲ್ಲಿ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಿದ್ದರು ಎಂಬ ಎಂಬ ಪ್ರತೀತಿ ಇದೆ.
ಒಂದೇ ಸಮುಚ್ಚಯದ ಎರಡು ತುದಿಗಳಲ್ಲಿ ಮಲ್ಲೇಶ್ವರ ಹಾಗೂ ವೆಂಕಟರಮಣ ಸ್ವಾಮಿಯ ದೇವಾಲಯಗಳಿವೆ. ಇದು ಹರಿ-ಹರ ಸಾಮರಸ್ಯ ಸಾರುತ್ತದೆ. ತಿರುಪತಿಯ ವೆಂಕಟರಮಣ ಸ್ವಾಮಿಯ ತದ್ರೂಪಿಯಾಗಿರುವ ಮಧುಗಿರಿ ವೆಂಕಟರಮಣ ವಿಗ್ರಹವು 6 ಅಡಿ ಎತ್ತರ ಹಾಗೂ 4 ಅಡಿ ಅಗಲವಿದೆ. ಈ ಸ್ವಾಮಿಯ ಎಡ ಭಾಗದಲ್ಲಿ ಅಲುವೇಲು ಮಂಗಮ್ಮ ಹಾಗೂ ಬಲ ಭಾಗದಲ್ಲಿ ಪದ್ಮಾವತಿ ದೇವಾಲಯಗಳಿವೆ.
ಸ್ಥಳೀಯರು ಹಾಗೂ ನೆರೆ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯದ ಆವರಣದಲ್ಲಿ ಸರದಿ ಸಾಲಿನಲ್ಲಿ ನಿಂತು ವೈಕುಂಠ ಏಕಾದಶಿ ದಿನದಂದು ಸ್ವಾಮಿಯ ದರ್ಶನ ಹಾಗೂ ದ್ವಾರದರ್ಶನ ಪಡೆಯುವುದು ವಾಡಿಕೆ.
ಸ್ವಾಮಿಗೆ ವಿಶೇಷ ಪೂಜೆ: ಅಭಿಷೇಕ, ನಿತ್ಯ ಆರಾಧನೆ ಸೇವೆ, ಸಹಸ್ರ ನಾಮ, ಮಂತ್ರ ಮಹಾಮಂಗಳಾರತಿ, ಪ್ರಾಕಾರೋತ್ಸವ ಹಾಗೂ ದ್ವಾರದರ್ಶನ ಇರಲಿದೆ.
ವೈಕುಂಠ ಏಕಾದಶಿ ಅಂಗವಾಗಿ ವೆಂಕಟರಮಣ ದೇವಾಲಯಕ್ಕೆ ಸಾವಿರಾರು ಮಂದಿ ಭಕ್ತರು ಬರಲಿದ್ದು, ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ಎಲ್.ಎಂ.ನಂದೀಶ್ ಹೇಳಿದರು.
ಲಾಡು ವಿತರಣೆ: ವೈಕುಂಠ ಏಕಾದಶಿಯಂದು ದೇವಾಲಯಕ್ಕೆ ಭಕ್ತರಿಗೆ ಉಚಿತವಾಗಿ 30 ಸಾವಿರ ಲಾಡುಗಳನ್ನು ನೀಡಲು ಮಧುಗಿರಿ ವಿದ್ಯಾಸಂಸ್ಥೆಯ ಎಂ.ಎಸ್.ಧರ್ಮವೀರ್ ಮುಂದಾಗಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರು ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿ ಬಣ್ಣ ಬಣ್ಣದ ಚಿತ್ತಾರಗಳನ್ನುಬಿಡಿಸಿದ್ದಾರೆ. ದೇವಾಲಯ ಆವರಣದಲ್ಲಿ ಹೂವಿನ ಅಲಂಕಾರ ಹಾಗೂ ಪ್ರಮುಖ ಬೀದಿಗಳಲ್ಲಿಬಾಳೆ ಕಂದು, ಬಣ್ಣ ಬಣ್ಣದ ವಿದ್ಯುತ್ ದೀಪ ಹಾಗೂ ಧ್ವನಿ ವರ್ಧಕ ಪ್ರಸಾರದ ವ್ಯವಸ್ಥೆ ಮಾಡ
ಲಾಗಿದೆ.
ಎಲ್ಲರ ಸಹಕಾರದೊಂದಿಗೆ 21ನೇ ವೈಕುಂಠ ಏಕಾದಶಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.