ವಿಜಯಪುರ: ನಗರದಲ್ಲಿ ಶುಕ್ರವಾರ ಮತ್ತಿಬ್ಬರಿಗೆ ಕೊರೊನಾ ಸೋಂಕು ತಗಲಿರುವುದು ದೃಢವಾಗಿದೆ. ಇದರಿಂದ ಕೋವಿಡ್–19 ಪೀಡಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯು ಕೆಂಪು ಪಟ್ಟಿಗೆ ಸೇರ್ಪಡೆಯಾಗಿದೆ.
ಪಿ221 ರೋಗಿಯ ಸಂಪರ್ಕದಿಂದ ಆರು ವರ್ಷದ ಬಾಲಕ ಮತ್ತು 28 ವರ್ಷ ವಯಸ್ಸಿನ ಮಹಿಳೆಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎರಡು ಕುಟುಂಬಕ್ಕೆ ಸೀಮಿತ: ಇದುವರೆಗೆ ಪಿ221 ರೋಗಿಯ ಕುಟುಂಬದ 12 ಹಾಗೂ ಪಿ228 ರೋಗಿಯ ಕುಟುಂಬಕ್ಕೆ ಸೇರಿದ 7 ಜನರಿಗೆ ಕೋವಿಡ್–19 ದೃಢವಾಗಿದೆ ಎಂದು ಹೇಳಿದರು.
ಸೀಲ್‌ಡೌನ್ ಪ್ರದೇಶದವರಿಗೆ ಸೂಚನೆ: ಸೀಲ್‌ಡೌನ್ ಮಾಡಲಾಗಿರುವ ಚಪ್ಪರಬಂದ್ ಪ್ರದೇಶದ ಜನರಲ್ಲಿ ಯಾರಿಗಾದರೂ ಜ್ವರ, ಕೆಮ್ಮು, ಶೀತ, ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಅಂತವರ ಆರೋಗ್ಯ ಕಾಳಜಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮನವಿ ಮಾಡಿದರು.
ಮನೆಮನೆಗೆ ಹಾಲು: ಸೀಲ್‌ಡೌನ್ ಆಗಿರುವ ಪ್ರದೇಶದಲ್ಲಿರುವ ಮೂರು ಸಾವಿರ ಮನೆಗಳಿಗೆ ಗುರುವಾರದಿಂದ ಆರಂಭಗೊಂಡು ಪ್ರತಿದಿನ ಅರ್ಧ ಲೀಟರ್ ಹಾಲನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದರು.
ಬೆಂಬಲಿಸಿ: ಕೋವಿಡ್–19 ಪೀಡಿತರ ಆರೈಕೆಯಲ್ಲಿ ತೊಡಗಿರುವ ವೈದ್ಯರು, ನರ್ಸ್‌ಗಳು ಹಾಗೂ ಸೀಲ್‌ಡೌನ್ ಪ್ರದೇಶದಲ್ಲಿ ವಿವಿಧ ಕಾರ್ಯಗಳಲ್ಲಿ ನಿರತವಾಗಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೊಲೀಸ್ ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಅವರ ಕುಟುಂಬದವರನ್ನು ಪ್ರತಿಯೊಬ್ಬರೂ ಗೌರವಿಸುವ ಜೊತೆಗೆ ಅವರ ಕಾರ್ಯವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ವೈದ್ಯ ಸಿಬ್ಬಂದಿಗೂ ಕ್ವಾರಂಟೈನ್: ಜಿಲ್ಲೆಯಲ್ಲಿ ಕೋವಿಡ್–19 ಪೀಡಿತರ ಚಿಕಿತ್ಸೆ, ಆರೈಕೆಯಲ್ಲಿ 50ಕ್ಕೂ ಹೆಚ್ಚು ವೈದ್ಯ ಸಿಬ್ಬಂದಿ ತೊಡಗಿದ್ದು, ಅವರು ಪಾಳಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವೈದ್ಯ ಸಿಬ್ಬಂದಿ ಖಾಸಗಿ ವಸತಿ ಗೃಹಗಳಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿ ಇದ್ದು, ವಾರಕ್ಕೊಮ್ಮೆ ಅವರ ಗಂಟಲುದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ: ಜಿಲ್ಲಾಸ್ಪತ್ರೆಯನ್ನು ಕೋವಿಡ್–19 ಆಸ್ಪತ್ರೆಯನ್ನಾಗಿ ಮಾರ್ಪಡಿಸಿರುವುದರಿಂದ ಇಲ್ಲಿಗೆ ಚಿಕಿತ್ಸೆ ಪಡೆಯಲು ಬರುವ ಇತರೆ ತೀವ್ರತರ ಕಾಯಿಲೆಯಿಂದ ಬಳಲುವ ರೋಗಿಗಳಿಗೆ ನಗರದ 24 ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕೆಲಸಕ್ಕೆ ಹಾಜರಾಗಲು ಮನವಿ: ‘ವೈದ್ಯರು, ನರ್ಸ್‌ಗಳು, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಸಿಬ್ಬಂದಿಗೆ ಜಿಲ್ಲೆಯಲ್ಲಿ ಎಲ್ಲಿಯೂ ಪೊಲೀಸರು ಅಡಚಣೆ ಮಾಡುತ್ತಿಲ್ಲ. ಕೆಲವರು ಸುಳ್ಳು ಹೇಳಿಕೊಂಡು ಮನೆಯಲ್ಲೇ ಇದ್ದಾರೆ. ದಯಮಾಡಿ ಇದು ಕೋವಿಡ್–19 ರೋಗದ ವಿರುದ್ಧ ಹೋರಾಡುವ ಯುದ್ಧದ ಕಾಲ. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಇರದೇ ಆಸ್ಪತ್ರೆಗೆ ಬಂದು ರೋಗಿಗಳ ಸೇವೆಯಲ್ಲಿ ತೊಡಗಬೇಕು’ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ಹಣಾಧಿಕಾರಿ ಗೋವಿಂದ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.