ADVERTISEMENT

ಅಂತರ್ಜಾಲ ಸೇವೆಗೆ 30 ವರ್ಷ!

​ಪ್ರಜಾವಾಣಿ ವಾರ್ತೆ
Published 1 ಜನವರಿ 2013, 19:59 IST
Last Updated 1 ಜನವರಿ 2013, 19:59 IST

ಲಂಡನ್ (ಐಎಎನ್‌ಎಸ್): ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ, ನಿತ್ಯ ಕೋಟ್ಯಂತರ ವ್ಯಕ್ತಿಗಳು ಬಳಕೆ ಮಾಡುತ್ತಿರುವ ಅಂತರ್ಜಾಲ ಸೇವೆಗೆ (ಇಂಟರ್‌ನೆಟ್) ಮೂವತ್ತು ವರ್ಷ ತುಂಬಿದೆ.

ಜನವರಿ 1, 1983ರಂದು ಹಿಂದಿದ್ದ ಕಂಪ್ಯೂಟರ್ ನೆಟ್‌ವರ್ಕ್ ವ್ಯವಸ್ಥೆಯನ್ನು ಬದಲಿಸುವ ಮೂಲಕ  ಅಂತರ್ಜಾಲ ಸೇವೆ ಆರಂಭವಾಗಿತ್ತು ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.

ಆರಂಭದ ಆ ದಿನ ಅಮೆರಿಕದ ರಕ್ಷಣಾ ಸಚಿವಾಲಯ 60ರ ದಶಕದಿಂದ ಚಾಲ್ತಿಯಲ್ಲಿ ಇದ್ದ  ಅರ್ಪಾನೆಟ್ ನೆಟ್‌ವರ್ಕ್ ಎಂಬ ವ್ಯವಸ್ಥೆಯನ್ನು ಇಂಟರ್‌ನೆಟ್ ಪ್ರೋಟೊಕಾಲ್ ಸೂಟ್ ಕಮ್ಯೂನಿಕೇಷನ್ ವ್ಯವಸ್ಥೆಗೆ (ಐಪಿಎಸ್) ಬದಲಾಯಿಸಿತು.

ಕಂಪ್ಯೂಟರ್‌ಗಳ ನಡುವೆ ಸಂಪರ್ಕ ಕಲ್ಪಿಸುವ ಈ ಹೊಸ ವಿಧಾನದಿಂದ ವರ್ಲ್ಡ್ ವೈಡ್ ವೆಬ್(ಡಬ್ಲು ಡಬ್ಲು ಡಬ್ಲು)ಗೆ `ದಾರಿ' ತೆರೆದುಕೊಂಡಿತು.

1960ರಲ್ಲಿ  ಸೇನಾ ಯೋಜನೆಯ ಭಾಗವಾಗಿ ಅರ್ಪಾನೆಟ್ ನೆಟ್‌ವರ್ಕ್ ಆರಂಭವಾಯಿತು. ವೆಲ್ಸ್‌ನ ವಿಜ್ಞಾನಿ ಡೊನಾಲ್ಡ್ ಡವೈಸ್ ಅವರು ತಯಾರಿಸಿದ ತಾಂತ್ರಿಕ ವಿನ್ಯಾಸದ ಆಧಾರದ ಮೇಲೆ ಈ ಯೋಜನೆ ಕಾರ್ಯಾರಂಭ ಮಾಡಿತು.

ಈ ಮೂಲ ಮಾದರಿಯನ್ನು ಅಮೆರಿಕದ ವಿವಿಧ ವಿಶ್ವವಿದ್ಯಾಲಯಗಳು ನಂತರದ ವರ್ಷಗಳಲ್ಲಿ ಅಭಿವೃದ್ಧಿಪಡಿಸಿದರು.

1973ರಲ್ಲಿ ಐಪಿಎಸ್ ಮತ್ತು ಟ್ರಾನ್ಸ್‌ಮಿಷನ್ ಪ್ರೊಟೊಕಾಲ್ (ಟಿಸಿಪಿ) ತಂತ್ರಜ್ಞಾನ ಬಳಕೆ ಆರಂಭವಾಯಿತು. ಈ ಹೊಸ ವ್ಯವಸ್ಥೆಯನ್ನು ಆಗಲೇ ಬಳಕೆಯಲ್ಲಿದ್ದ ನೆಟ್‌ವರ್ಕ್ ಕಂಟ್ರೋಲ್ ಪ್ರೋಗ್ರಾಮ್‌ಗೆ (ಎನ್‌ಸಿಪಿ) ಪರ್ಯಾಯವಾಗಿ ರೂಪಿಸಲಾಯಿತು.

ಜನವರಿ 1, 1983ರ ಹೊತ್ತಿಗೆ ಇಂಟರ್‌ನೆಟ್ ಪ್ರೋಟೊಕಾಲ್ ಬಳಕೆ ಸಂಪೂರ್ಣವಾಗಿ ಯಶಸ್ವಿಯಾಯಿತು. ಈ ಮೂಲಕ ಅಧಿಕೃತವಾಗಿ ಅಂತರ್ಜಾಲ ಸೇವೆ ಜನ್ಮತಾಳಿತು.

1989ರಲ್ಲಿ ಬ್ರಿಟನ್‌ನ ಕಂಪ್ಯೂಟರ್ ವಿಜ್ಞಾನಿ ಟಿಮ್ ಬನರ್ಸ್‌ ಲೀ ಅವರು ವರ್ಲ್ಡ್ ವೈಡ್ ವೆಬ್ ಉಗಮಕ್ಕೆ ಕಾರಣರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.