ADVERTISEMENT

ಅಕ್ಕ ಸಮ್ಮೇಳನಕ್ಕೆ ಹೈಟೆಕ್‌ ಸ್ಪರ್ಶ

ನಾಗತಿಹಳ್ಳಿ ಚಂದ್ರಶೇಖರ
Published 6 ಸೆಪ್ಟೆಂಬರ್ 2014, 19:38 IST
Last Updated 6 ಸೆಪ್ಟೆಂಬರ್ 2014, 19:38 IST

ಸ್ಯಾನ್‌ ಹುಸೆ (ಅಮೆರಿಕ) : ನೂರಾರು ಜನ  ಟೆಕ್ಕಿಗಳು ಪ್ರಯೋಗ ಶೀಲತೆಯಿಂದ ಸಾಂಪ್ರದಾಯಿಕ ಸಮ್ಮೇಳನ­ವೊಂದರ ಸ್ವರೂಪವನ್ನೇ ಬದಲಿಸಬಲ್ಲರು ಎಂಬುದಕ್ಕೆ  ಅಮೆರಿಕೆಯ ಸ್ಯಾನ್‌ ಹುಸೆ ನಗರದಲ್ಲಿ ಕಳೆದ ತಿಂಗಳು 29ರಿಂದ 31ರ ವರೆಗೆ ನಡೆದ ಅಕ್ಕ ಸಮ್ಮೇಳನ ಸಾಕ್ಷಿ.

ಹಳೆಯ ಗಾಣಕ್ಕೆ ಸಿಕ್ಕು ನೀರಸವಾಗಿ ಗಸ್ತು ಹೊಡೆ­ಯುವ ಏಕತಾನತೆ ಮಾಯವಾಗುತ್ತಿದೆ. ನಮ್ಮ ಭಾಷೆ, ಸಂಸ್ಕೃತಿ, ಸಮಾವೇಶಗಳು ಹೊಸದಿಕ್ಕನ್ನು ಶೋಧಿಸು­ತ್ತಿವೆ. ತಾಂತ್ರಿಕತೆ ಜತೆಗೆ ಸೃಜನಶೀಲತೆ ಬೆಸೆದು­ಕೊಳ್ಳು­ತ್ತಿದೆ. ಹದಿನಾರರ ಹರೆಯದ, ದ್ವೈವಾರ್ಷಿಕ ಆಚರಣೆ­ಯಾದ, ಈ ಎಂಟನೇ ಕನ್ನಡ ಸಮ್ಮೇಳನ ನಿಜಕ್ಕೂ ಭಿನ್ನವಾಗಿತ್ತು. ಅಲ್ಲಿ ಕಂಡ ಮುಖಗಳು ಅನೇಕ. ಡಾ. ಎಸ್‌. ಎಲ್‌. ಭೈರಪ್ಪ, ಉಮಾಶ್ರೀ, ಐ. ಎಂ. ವಿಠ್ಠಲ­ ಮೂರ್ತಿ, ಜಿ. ಎಂ. ಸಿದ್ದೇಶ್‌, ಹಲವು ಲೋಕಸಭಾ ಸದಸ್ಯರು, ವಿಧಾನ ಸಭಾ ಸದಸ್ಯರು, ಕಲಾವಿದರು, ಬರಹ­ಗಾರರು .... ಮಿನಿ ಕರ್ನಾಟಕವೇ ಅಲ್ಲಿತ್ತು.

ಸಮಾವೇಶವೊಂದರಲ್ಲಿ ದೋಷ ಹುಡುಕಿ ಟೀಕಿಸು­ವುದು ಸುಲಭ. ಆದರೆ ಫಲಾಪೇಕ್ಷೆ ಇಲ್ಲದೆ, ತಿಂಗಳು­ಗಟ್ಟಲೆ, ಕೆಲಸ ಕಾರ್ಯ ಬದಿಗಿಟ್ಟು ಕನ್ನಡದ ಕೈಂಕರ್ಯ ತೊಟ್ಟ ನಮ್ಮ ಸಾಫ್ಟ್‌ವೇರ್‌ ಎಂಜಿನಿಯರ್‌­ಗಳನ್ನು ಮುಕ್ತವಾಗಿ ಅಭಿನಂದಿಸಬೇಕು. ಇದರಲ್ಲಿ ಅನೇ­ಕರು ತೆರೆಯ ಹಿಂದೆ ದುಡಿದವರು. ಹಣ ಸಂಗ್ರ­ಹಿಸಿದವರು, ಎಂಟರಲ್ಲಿ ಏಳು ಸಮ್ಮೇಳನಗಳನ್ನು ನೋಡಿರುವ ನನಗೆ ಈ  ಸಿಲಿಕಾನಿಗರ ಸಾಹಸ, ಹೊಸ­ತನ ಹುಡುಕಾಟದ ಪ್ರಯತ್ನ ಮೆಚ್ಚುಗೆಯಾಯಿತು.

ಈ ಪ್ರಯತ್ನ ಸಂಪೂರ್ಣ ಫಲದಾಯಕವಾಗಿಲ್ಲದಿ­ರ­ಬಹುದು. ಆದರೆ ಅದರ  ಕ್ರಮ, ಉತ್ಸಾಹ ಎದ್ದು ಕಾಣುತ್ತಿತ್ತು. ಈ ಉತ್ಸಾಹ ಕೊಂಚ ಅತಿಯಾಗಿ ಕಾರ್ಯಕ್ರಮಗಳು ತುಂಬಿ ತುಳುಕಿ ಆಸಕ್ತರ ಕೈಗೆ ಸಿಗದೆ ಚೆಲ್ಲಿ ಹೋದವು. ನೃತ್ಯ,ನಾಟಕಗಳು ಅಗತ್ಯಕ್ಕಿಂತ ಅಧಿಕವಾಗಿದ್ದುವು.

ಎರಡು ವರ್ಷಕ್ಕೊಮ್ಮೆ ನಡೆಯುವ ಈ ಮೇಳದಲ್ಲಿ ಎಲ್ಲರೂ ವೇದಿಕೆ ಬಯಸುವುದು ಸಹಜ. ಆದರೆ ಇದನ್ನು ನಿಯಂತ್ರಿಸಿ ಗುಣಮಟ್ಟಕ್ಕೆ ಪ್ರಾತಿನಿಧ್ಯ  ನೀಡಿ ಕೆಲವರ ಪ್ರದರ್ಶಗಳನ್ನಾದರೂ  ನಿರ್ದಾಕ್ಷಿಣ್ಯವಾಗಿ ಕತ್ತರಿಸಬಹುದಿತ್ತು. ಇದು ನಾನು ಹೇಳುವಷ್ಟು ಸುಲಭದ ಮಾತಲ್ಲ. ವೈಯಕ್ತಿಕ ಸಂಬಂಧ, ಮುಲಾಜು, ಪ್ರಬಲ ವಶೀಲಿ, ವಕಾಲತ್ತು, ಪ್ರಯೋಜಕತ್ವ, ಪ್ರಾದೇಶಿಕತೆ (ಅಮೆರಿಕನ್‌ ಪ್ರಾದೇಶಿಕತೆ, ಇಂಡಿಯನ್‌ ಪ್ರಾದೇಶಿಕತೆ,) ಸಾವಿರ ಯೋಜನ ದಾಟಿದರೂ ಬಿಡದ ಜಾತಿ – ಉಪಜಾತಿಗಳ ಉಸಿರುಕಟ್ಟಿಸುವ ಬಲೆ, ಇವನ್ನೆಲ್ಲ ಕಿತ್ತೊಗೆದು ನಿಷ್ಠುರ ನಿರ್ಣಯ ಕಷ್ಟ ಸಾಧ್ಯ.

ನಿಮ್ಮವರೊಬ್ಬರಿರುವುದಾದರೆ, ನಮ್ಮವರಿಬ್ಬರು ಇರಲೇಬೇಕೆಂಬ ಕೊಡು – ಕೊಳ್ಳು ಸಂಬಂಧವೇ ಅಂತಿಮ ಸತ್ಯವಾದುದರಿಂದ, ಉತ್ತಮರು, ಮಧ್ಯಮರು, ಅಧಮರು ಒಳಸೇರಿಕೊಳ್ಳು ತ್ತಾರೆ.ಆದರೆ ಹೈಟೆಕ್‌ ತರುಣರ ಈ ಒಳನೋಟ ಗಳನ್ನು ಗಮನಿಸಿ ಅವರು ಹದಿಹರೆಯದವರನ್ನು ಸೆಳೆಯಲು; ಹಿರಿಯ ನಾಗರಿಕರನ್ನು  ನೋಡಿಕೊಳ್ಳಲು, ಎಲ್ಲೆಲ್ಲಿ ಏನೇನು ಅಂತ ಪ್ರತಿಕ್ಷಣ ತಿಳಿಯುವ ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಲು; ಕಾರ್ಯಕ್ರಮವನ್ನು ಸಕಾಲಕ್ಕೆ ನೆನಪಿಸುವ ರಿಮೈಂಡರ್‌ ಇಡಲು; ಮೆಕೆನ್ರಿ ಸಭಾಂಗಣದಲ್ಲಿ ಸರ್ವತ್ರ ವೈಫೈ ದೊರಕಿಸಲು; ನಾಲ್ಕು ಸಾವಿರ ಅತಿಥಿಗಳನ್ನು ಸ್ವೀಕರಿಸಲು ಸರ್ವ ಬಗೆಯಲ್ಲಿ ಸನ್ನದ್ಧವಾಗಿರಲು; ಸಕಲ ವಿವರಗಳುಳ್ಳ ‘ಫಲಕ’ ಎಂಬ ಪಕ್ಷಿನೋಟದ ಪುಸ್ತಕಗಳನ್ನು ಪ್ರಕಟಿಸಲು; ಅದರಲ್ಲಿ ಪ್ರತಿ ಕಾರ್ಯಕ್ರಮದ ಸಮಗ್ರ ವ್ಯಕ್ತಿ ವಿವರ, ಕೋಡ್‌, ಭಾವಚಿತ್ರ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕಾರ್ಯಕ್ರಮದ ವಿವರಗಳನ್ನು ದಾಖಲಿಸಲು; ಈ ಟೆಕ್ಕಿಗಳು ತಿಂಗಳುಗಟ್ಟಲೆ ಪಟ್ಟಿರುವ ಶ್ರಮ ಶ್ಲಾಘನೀಯ.

ಚಂದ್ರಲೋಕಕ್ಕೆ ಹೋಗಿ ಆಚರಿಸಿದರೂ ಕನ್ನಡ ಸಮ್ಮೇಳನಗಳು ಕನ್ನಡ ಸಮ್ಮೇಳನಗಳೇ. ಅವು ಯಾವ ಚಿಮ್ಮುಹಲಗೆ ಇಟ್ಟರೂ ಒಂದು ಹಂತದಿಂದ ಮೇಲೆ ಜಿಗಿಯುವುದಿಲ್ಲ. ಅದಕ್ಕೆ ವ್ಯವಸ್ಥಾಪಕರು ಮಾತ್ರ ಕಾರಣ ಎನ್ನಲಾಗುವುದಿಲ್ಲ. ಅದು ಕನ್ನಡದ್ದೇ ಜಾಯಮಾನ. ಅಲ್ಲಿ ಸಾಹಿತ್ಯ, ಕಲೆ, ನಾಟಕಗಳು ಮಾತ್ರ ಇರುವುದಿಲ್ಲ. ಸೀರೆ, ಒಡವೆ, ರಿಯಲ್‌ ಎಸ್ಟೇಟ್‌, ಮ್ಯಾಚ್‌ ಮೇಕಿಂಗ್‌, ಫ್ಯಾಷನ್‌ ಶೋ, ವೈದ್ಯಕೀಯ ಸಮಾವೇಶ, ಗಣಪತಿ ಪೂಜೆ, ಯೋಗ ಶಿಬಿರ ಎಲ್ಲವೂ ಇರುತ್ತದೆ. ಭಾಷೆಯ ಜೊತೆಗೆ, ಆದರೆ ಭಾಷೆಯನ್ನೂ ಮೀರಿದ ವ್ಯಾವಹಾರಿಕ, ಭಾವನಾತ್ಮಕ ಅಗತ್ಯಗಳು ಸಮಾವೇಶದಲ್ಲಿ ಸೇರಿಕೊಳ್ಳುತ್ತವೆ. ಅಲ್ಲಿ ಯಶಸ್ವಿ ಉದ್ಯಮಿಗಳು, ಉದ್ಯೋಗಸ್ಥರು, ಕುಶಲಿಗಳು ಮಾತ್ರವಲ್ಲ ಲಲಿತ ಕಲೆಗಳಲ್ಲಿ ತಾಯ್ನಾಡನ್ನು ಮೀರಿಸುವ ಸೃಜನಶೀಲರ  ತಂಡವೇ ಇದೆ. ಸಾಹಿತ್ಯ, ನಾಟಕ, ಸಂಗೀತ, ನೃತ್ಯ ಮುಂತಾದವುಗಳಲ್ಲಿ ಪಾರಮ್ಯ ಸಾಧಿಸುತ್ತಿದ್ದಾರೆ.

ಕರ್ನಾಟಕ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಪಡೆಯದೆಯೂ ಸಮಾವೇಶ ನಡೆಸುವಷ್ಟು ಗಟ್ಟಿಮುಟ್ಟಾಗಿದ್ದಾರೆ. ಒಂದು ಕಾಲದಲ್ಲಿ ಅಮೆರಿಕದ ಕನ್ನಡ ಸಮಾವೇಶದ ಕಾರ್ಯಕ್ರಮಗಳೆಂದರೆ ಹೈಸ್ಕೂಲು ಮಕ್ಕಳ ಶಾಲಾ ಕಾರ್ಯಕ್ರಮಗಳಂತಿರುತ್ತವೆ ಎಂಬ ಟೀಕೆ ಕೇಳಿಬರುತ್ತಿತ್ತು. ಆದರೆ ಎಂಟನೇ ಅಕ್ಕ ಸಮಾವೇಶ ಇದನ್ನು ಮೀರಲು ಪ್ರಯತ್ನಿಸಿತ್ತು. ಹಲವು ಕಾರ್ಯಕ್ರಮಗಳು ಪ್ರಬುದ್ಧವಾಗಿದ್ದವು. ಆದರೆ  ಒತ್ತೊತ್ತಾಗಿದ್ದುದರಿಂದ, ಕಡೆ ಕ್ಷಣದ ಬದಲಾವಣೆ ಗಳಿಂದ, ಅನೇಕ ಕಾರ್ಯಕ್ರಮಗಳು ಸಮಾನಾಂತರ ವೇದಿಕೆಗಳಲ್ಲಿ ಸಾಗುತ್ತಿದ್ದುದರಿಂದ ಕೈತಪ್ಪಿ ಹೋದವು.

ಅಕ್ಕದ ಸಂಸ್ಥಾಪಕ ಅಮರನಾಥ ಗೌಡರು, ಅಧ್ಯಕ್ಷರಾದ ಡಾ. ಹಳೆಕೋಟೆ ವಿಶ್ವಾಮಿತ್ರ ಅವರ ಪರಿಶ್ರಮ, ಆತಿಥ್ಯ ಅಸಾಧಾರಣವಾಗಿತ್ತು. ಅಕ್ಕದ ಬೇರುಗಳು ಇವು. ಇದರೊಂದಿಗೆ ಆರು ಟ್ರಸ್ಟಿಗಳಿದ್ದಾರೆ. ಹದಿನಾರು ವರ್ಷಗಳ ಹಿಂದೆ ‘ಅಕ್ಕ’ ಎಂಬ ಪರಿಕಲ್ಪನೆಯನ್ನು ಶೋಧಿಸಿದ್ದೇ ಒಂದು ಬೆರಗು. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ, ಈ ಸಮಾವೇಶದೆ ಯುವಕಟ್ಟಾಳುಗಳೆಲ್ಲ, ಚಿಗುರುಗಳಿದ್ದಂತೆ. ಈ ಚಿಗುರುಗಳು ಬೇರನ್ನು  ಮರೆಯಬಾರದು. ಏಕೆಂದರೆ ಅಕ್ಕಳಿಗೊಂದು ಇತಿಹಾಸವಿದೆ. ಹಾಗೆಯೇ ಚಿಗುರು ಹೊಮ್ಮುವ ಶಕ್ತಿ ಸೊಬಗನ್ನು ಕಂಡು ಬೇರೂ ಸಹ ಆನಂದ ಪಡಬೇಕು. ಬೇರು ಚಿಗುರಿನ ಸಮನ್ವಯ ತುಸು ಕಡಿಮೆ ಇರುವಂತಿತ್ತು.

ಎಲ್ಲರ ಗಮನ ಸೆಳೆದ ಎರಡು ಕಾರ್ಯಕ್ರಮಗಳನ್ನಿಲ್ಲಿ ಸಾಂಕೇತಿಕವಾಗಿ ಉಲ್ಲೇಖಿಸುವೆ. ಮೊದಲನೆಯದು ಪ್ರೊ. ಕೃಷ್ಣೇಗೌಡರ ಏಕವ್ಯಕ್ತಿ ಪ್ರದರ್ಶನ. ಹಾಸ್ಯಕ್ಕೊಂದು ಸಾಹಿತ್ಯಿಕ ಸಾಂಸ್ಕೃತಿಕ ಘನತೆಯನ್ನು ಇರಿಸಿಕೊಂಡು ಮಾತನಾಡುವ ಕೃಷ್ಣೇಗೌಡರು ಪ್ರತಿಸಲದಂತೆ ಈ ಸಲವೂ ಮನಸೂರೆಗೊಂಡರು. ಇವರಿಂದ ಪಾಠ ಕೇಳುವ ವಿದ್ಯಾರ್ಥಿಗಳು ಎಷ್ಟು ಅದೃಷ್ಟವಂತರು ಅನಿಸಿತು. ಆದರೆ ಕಾರ್ಯಕ್ರಮದಲ್ಲಿ ಏರುಪೇರುಗಳಾದಾಗ ಶೂನ್ಯ ತುಂಬಲು ಕೃಷ್ಣೇಗೌಡರನ್ನು ಫಿಲ್ಲರ್‌ ರೀತಿಯಲ್ಲಿ ಅತಿಬಳಕೆ ಮಾಡಿದ್ದು ಅಷ್ಟು ಸರಿಯಲ್ಲ. ಇದು ರುಚಿಯಾದ ಮೆನುವನ್ನು ಅತಿಯಾಗಿ ಬಡಿಸಿದಂತೆ. ಚಿತ್ರ ನಟ ಪುನೀತ್‌ ಅವರನ್ನು ವ್ಯವಸ್ಥಾಪಕರು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ವೇದಿಕೆಯ ಮೇಲಿರುವಷ್ಟು ಸಮಯ, ಪುನೀತ್‌ ತನ್ನ ತಂದೆಯವರ ವಿನಯ, ಸಜ್ಜನಿಕೆ ಮತ್ತು ಹಾಸ್ಯ ಪ್ರಜ್ಞೆಗಳಿಂದ ಎಲ್ಲರಿಗೂ ಇಷ್ಟವಾದರು.

ಎರಡನೆಯದು ನಮ್ಮ ಪ್ರೀತಿಯ ಜನಪದ ಕಲಾವಿದರು. ನಗಾರಿ, ತಮಟೆ, ಚೌಡಿಕೆ ಮೇಳ ಇಡೀ ಅಮೆರಿಕೆಯಲ್ಲಿ ಪ್ರತಿಧ್ವನಿಸಿದವು. ಜನಪದ ಕಲಾವಿದರಿಗೆ ಛತ್ರ ಮತ್ತು ಚಿತ್ರಾನ್ನ ಎಂಬ ಅಸಮಾನತೆ ಇರಲಿಲ್ಲ. ಅಥಣಿಯಿಂದ ಬಂದಿದ್ದ ಚೌಡಿಕೆ ಮೇಳದ ಕಲಾವಿದರಿಗೆ ಸಾವಿರ ಡಾಲರುಗಳ ಇನಾಮು ; ತಮಟೆ ಮುನಿವೆಂಕಟಪ್ಪನಿಗೆ ‘ವಿಶೇಷ’ ತೀರ್ಥಪ್ರಸಾದದ ವ್ಯವಸ್ಥೆ; ಮುಖ್ಯ ವೇದಿಕೆಯಲ್ಲೂ, ಮೆರವಣಿಗೆಯಲ್ಲೂ ಜನಪದ ಕಲಾವಿದರು ಹಾಡಿ, ನುಡಿಸಿ, ಕುಣಿದು ಕುಪ್ಪಳಿಸುವ ಮುಕ್ತ ಅವಕಾಶ; ಇದನ್ನೆಲ್ಲ ಆತಿಥೇಯರು ಚೆನ್ನಾಗಿ ನಿರ್ವಹಿಸಿದರು. ಸರ್ಕಾರ ಕೊಟ್ಟ ಸೌಲಭ್ಯವನ್ನು ಸದ್ಬಳಕೆ ಮಾಡಿ, ಯೋಗ್ಯ ಕಲಾವಿದರನ್ನು ಆರಿಸಿಕೊಂಡು ಕರೆತಂದಿದ್ದ ರಂಗ ಸಂಘಟಕ ಕಪ್ಪಣ್ಣನವರಿಗೆ ಇದರ ಯಶಸ್ಸು ಸಲ್ಲಬೇಕು. ಕಪ್ಪಣ್ಣ ಆಗಾಗ ಒಳ್ಳೆಯ ಕೆಲಸ ಮಾಡುತ್ತಾರೆ!

‘ಸ್ವಕೃತಿ ವಾಚನ’ ಎಂಬ ಸಾಹಿತ್ಯಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನನಗೆ ಅಲ್ಲಿನ ಸಾಹಿತ್ಯ ಸಂವೇದನೆಗಳು ಆಪ್ತವಾದವು. ಇಪ್ಪತ್ತು ವರ್ಷದ ಹಿಂದೆ ಈ ಊರಲ್ಲಿ ನೆಲೆಸಿದ್ದ, ಅಮೆರಿಕ ಚಿತ್ರವನ್ನು ಪರಿಕಲ್ಪಿಸಿದ್ದ ನನಗೆ ಅದರಲ್ಲಿ ಬಹುಬಗೆಯಲ್ಲಿ ನೆರವಾಗಿದ್ದ, ಅನೇಕ ಮುಖಗಳು ನವೀಕರಣಗೊಂಡವು. ನಮ್ಮ ಕರ್ನಾಟಕಕ್ಕೂ ಅಮೆರಿಕಾಗೂ ಆಗಲೂ, ಈಗಲೂ ಅದೆಷ್ಟು ಗೋಲ್ಡನ್‌ ಗೇಟ್ಸ್ ಬ್ರಾಡ್ಜ್ ಗಳಿವೆ ಅನ್ನಿಸತೊಡ ಗಿತು. ಮುಂದಿನ ಸಮ್ಮೇಳನಗಳೂ ಸುವರ್ಣ ಸೇತುವೆಗಳಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT