ವಾಷಿಂಗ್ಟನ್ (ಪಿಟಿಐ): ಅಮೆರಿಕದ ವಲಸೆ ನೀತಿಯನ್ನು ಅಮೂಲಾಗ್ರವಾಗಿ ಬದಲಾಯಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.
ಹೊಸ ನೀತಿಯಲ್ಲಿ ಅರ್ಹತೆಗೆ ಆದ್ಯತೆ ದೊರೆಯಲಿದೆ. ಗಡಿ ಭದ್ರತೆಯನ್ನು ಬಲಪಡಿಸುವುದು ಮತ್ತು ಗ್ರೀನ್ ಕಾರ್ಡ್ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಈ ನೀತಿಯ ಉದ್ದೇಶವಾಗಿದೆ. ಟ್ರಂಪ್ ಅವರ ಅಳಿಯ ಜಾರ್ರಡ್ ಕುಷ್ನೇರ್ ಈ ಹೊಸ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಉನ್ನತ ಪದವಿ ಮತ್ತು ಆಯಾ ವೃತ್ತಿಗಳಿಗೆ ಅರ್ಹತೆ ಇರುವವರು ಸುಲಭವಾಗಿ ವೀಸಾ ಪಡೆಯಲಿದ್ದಾರೆ. ಸದ್ಯಕ್ಕೆ ಶೇಕಡ 66ರಷ್ಟು ಗ್ರೀನ್ ಕಾರ್ಡ್‌ಗಳನ್ನು ಕುಟುಂಬದ ಸಂಬಂಧಿಕರಿಗೆ ನೀಡಲಾಗುತ್ತಿದ್ದು, ಶೇಕಡ 12ರಷ್ಟು ಮಾತ್ರ ಕೌಶಲ ಆಧಾರದ ಮೇಲೆ ನೀಡಲಾಗುತ್ತಿದೆ. ಟ್ರಂಪ್ ಆಡಳಿತ ಈ ವ್ಯವಸ್ಥೆಯನ್ನು ಬದಲಾಯಿಸಲು ಮುಂದಾಗಿದೆ.
ಆದರೆ, ಹೊಸ ನೀತಿಗೆ ಸಂಸತ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗುವ ನಿರೀಕ್ಷೆ ಇದೆ. ರಿಪಬ್ಲಿಕನ್ ಸಂಸದರನ್ನು ಮನವೊಲಿಸುವಲ್ಲಿ ಟ್ರಂಪ್ ಯಶಸ್ವಿಯಾದರೂ ವಿರೋಧ ಪಕ್ಷ ಡೆಮಾಕ್ರಟಿಕ್ ಸಂಸದರು ತಮ್ಮ ಬಿಗಿ ನಿಲುವನ್ನು ಸಡಿಲಿಸುವ ಸಾಧ್ಯತೆಗಳು ಕಡಿಮೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಟ್ರಂಪ್ ಮತ್ತು ಕುಶ್ನೇರ್ ಅವರು ಈಗಾಗಲೇ ಹೊಸ ನೀತಿಯ ಕುರಿತು ರಿಪಬ್ಲಿಕನ್ ಸಂಸದರ ಜತೆ ಚರ್ಚಿಸಿದ್ದಾರೆ.
ಪ್ರತಿ ವರ್ಷ 11 ಲಕ್ಷ ಗ್ರೀನ್ ಕಾರ್ಡ್ ವಿತರಿಸುತ್ತಿರುವ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಗಳು ಕಡಿಮೆ. ಆದರೆ, ಉದ್ಯೋಗ ಮತ್ತು ಕೌಶಲದ ಆಧಾರದ ಮೇಲೆ ಅರ್ಧದಷ್ಟು ಗ್ರೀನ್ ಕಾರ್ಡ್ ನೀಡುವ ಬಗ್ಗೆ ಟ್ರಂಪ್ ನಿರ್ಧಾರ ಪ್ರಕಟಿಸಬಹುದು. ಇದರಿಂದ, ‘ಎಚ್–1ಬಿ’ ವೀಸಾ ಹೊಂದಿರುವ ಸಾವಿರಾರು ಭಾರತೀಯರಿಗೂ ಅನುಕೂಲವಾಗಬಹುದು ಎಂದು ತಿಳಿಸಿದ್ದಾರೆ.
2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹೊಸ ವಲಸೆ ನೀತಿಯೇ ಹೆಚ್ಚು ಚರ್ಚೆಗೆ ಗ್ರಾಸವಾಗುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.