ಅಬುಜಾ (ಪಿಟಿಐ): ನೈಜೀರಿಯಾದ ಖ್ಯಾತ ಲೇಖಕ, ವಿಶ್ವ ಸಾಹಿತ್ಯದಲ್ಲಿ ಆಫ್ರಿಕಾಕ್ಕೆ ವಿಶಿಷ್ಟ ಸ್ಥಾನಮಾನ ಕಲ್ಪಿಸಿಕೊಟ್ಟ ಚಿನುವಾ ಅಚೆಬೆ (84) ಇನ್ನಿಲ್ಲ.
ಅಲ್ಪಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು ನಿಧನರಾಗಿದ್ದಾರೆ ಎಂದು ಅವರ ಏಜೆಂಟ್ ಆಂಡ್ರ್ಯೂ ವಿಲೆ ತಿಳಿಸಿದ್ದಾರೆ. ಬಂಡಾಯ ಮನೋಭಾವದ, ಮುತ್ಸದ್ದಿ ಚಿನುವಾ ಅಚೆಬೆ ಅವರನ್ನು ಆಧುನಿಕ ಆಫ್ರಿಕಾ ಸಾಹಿತ್ಯದ ಪಿತಾಮಹ ಎಂದೇ ಪರಿಗಣಿಸಲಾಗುತ್ತದೆ.
ಬರೀ ಸಾಹಿತಿಯಾಗಿ ಅಷ್ಟೇ ಅಲ್ಲ, ನೈಜೀರಿಯಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೂ ಹೋರಾಡಿದವರು ಅಚೆಬೆ. ತಮ್ಮ ಜೀವನದ ಬಹುಕಾಲವನ್ನು ಅಮೆರಿಕದಲ್ಲಿ ಕಳೆದರೂ ಆಫ್ರಿಕಾದ ಹಿತಾಸಕ್ತಿ ಎತ್ತಿಹಿಡಿದವರು. ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಆಫ್ರಿಕಾ ಬಿಂಬಿಸಿದ ಬಗೆಯನ್ನು ಕಟುವಾಗಿ ಟೀಕಿಸಿದವರು.
1958ರಲ್ಲಿ ಪ್ರಕಟವಾದ `ಫಾಲ್ ಅಪಾರ್ಟ್' ಕಾದಂಬರಿ ಅಚೆಬೆ ಅವರಿಗೆ ವಿಶ್ವಮಾನ್ಯತೆ ತಂದುಕೊಟ್ಟಿತು. 20ನೇ ಶತಮಾನದ ಅತಿ ಮಹತ್ವದ ಕೃತಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಈ ಕಾದಂಬರಿ, ವಸಾಹತೋತ್ತರ ಆಫ್ರಿಕಾ ಸಾಹಿತ್ಯದಲ್ಲಿ ಮೈಲಿಗಲ್ಲು. ಷೇಕ್ಸ್‌ಪಿಯರ್ ಇಂಗ್ಲಿಷ್ ಸಾಹಿತ್ಯವನ್ನು, ಪುಷ್ಕಿನ್ ರಷ್ಯಾವನ್ನು ಪ್ರಭಾವಿಸಿದಂತೆ ಅಚೆಬೆ ಆಫ್ರಿಕಾದಲ್ಲಿ ಪ್ರಭಾವ ಹೊಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.