ಇಸ್ಲಾಮಾಬಾದ್ (ಪಿಟಿಐ/ಎಎಫ್‌ಪಿ): ಬೇಹುಗಾರಿಕೆ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಸೋಮವಾರ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ತಮ್ಮ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡಿದರು.
ಗಾಜಿನಿಂದ ಬೇರ್ಪಡಿಸಿದ ಕೋಣೆಯಲ್ಲಿ ತಾಯಿ ಅವಂತಿ ಮತ್ತು ಪತ್ನಿ ಚೇತನ್ ಕುಲ್ ಅವರೊಂದಿಗೆ ಕುಲಭೂಣ್ ಮುಖಾಮುಖಿಯಾದರು.
ಪರಸ್ಪರ ಎದುರು ಬದುರು ಕುಳಿತಿದ್ದರೂ ಗಾಜಿನ ಗೋಡೆ ಅಡ್ಡ ಇದ್ದ ಕಾರಣ ನೇರವಾಗಿ ಮಾತನಾಡಲು ಸಾಧ್ಯವಾಗಲಿಲ್ಲ. ಇಂಟರ್‌ಕಾಮ್‌ನಲ್ಲಿಯೇ 40 ನಿಮಿಷ ಮಾತುಕತೆ ನಡೆಸಿದರು.
ಈ ಭಾವುಕ ಕ್ಷಣಕ್ಕೆ ಪಾಕಿಸ್ತಾನದಲ್ಲಿ ಭಾರತದ ಉಪ ಹೈಕಮಿಷನರ್ ಜೆ.ಪಿ. ಸಿಂಗ್ ಸಾಕ್ಷಿಯಾದರು. ಪಾಕಿಸ್ತಾನದ ವಿದೇಶಾಂಗ ಕಚೇರಿ (ಭಾರತಕ್ಕೆ ಸಂಬಂಧಿಸಿದ ವ್ಯವಹಾರ) ನಿರ್ದೇಶಕಿ ಡಾ. ಫರೇಹಾ ಬುಗ್ತಿ ಜತೆಗಿದ್ದರು.
ಕಳೆದ ಮಾರ್ಚ್ 3ರಂದು ಸೆರೆಯಾದ ನಂತರ ಜಾಧವ್ ಅವರು ತಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗುತ್ತಿರುವುದು ಇದೇ ಮೊದಲು. ಬಂಧನದ ಬಳಿಕ ಅವರನ್ನು ಎಲ್ಲಿಡಲಾಗಿದೆ ಎಂಬ ಮಾಹಿತಿಯನ್ನು ಪಾಕಿಸ್ತಾನ ನೀಡಿರಲಿಲ್ಲ.
ಜಾಧವ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸುತ್ತಿರುವ ಚಿತ್ರಗಳನ್ನು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಟ್ವಿಟರ್‌ನಲ್ಲಿ ಪ್ರಕಟಿಸಿದೆ.
ಈ ಚಿತ್ರಗಳ ಗುಣಮಟ್ಟ ಉತ್ತಮವಾಗಿಲ್ಲದಿರುವುದರಿಂದ ಜಾಧವ್ ಆರೋಗ್ಯ ಸ್ಥಿತಿ ಹೇಗಿದೆ ಎಂಬುದು ಸ್ಪಷ್ಟವಾಗಿ ಗೊಚರಿಸುವುದಿಲ್ಲ. ಆದರೆ, ಕುರ್ಚಿಯಲ್ಲಿ ಆರಾಮವಾಗಿ ಕುಳಿತು ಮಾತನಾಡಿರುವ ಅವರು ಆರೋಗ್ಯದಿಂದ ಇರುವಂತೆ ಕಾಣುತ್ತಾರೆ.
ಮಧ್ಯಾಹ್ನ 1.35ಕ್ಕೆ ಆರಂಭಗೊಂಡ ಮಾತುಕತೆ 40 ನಿಮಿಷಗಳವರೆಗೆ ಮುಂದುವರಿಯಿತು. ಭಾರತದ ರಾಜತಾಂತ್ರಿಕ ಅಧಿಕಾರಿಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ಹೇಳಿದೆ.
ಭೇಟಿಯ ನಂತರ ಜಾಧವ್ ತಾಯಿ ಮತ್ತು ಪತ್ನಿ ರಾತ್ರಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಮಾತುಕತೆಯ ವಿವರಗಳು ಇನ್ನೂ ಬಹಿರಂಗವಾಗಿಲ್ಲ.
ಮಾನವೀಯ ನೆಲೆಯಲ್ಲಿ ಅವಕಾಶ:
‘ರಾಷ್ಟ್ರಪಿತ ಮೊಹಮ್ಮದ್ ಅಲಿ ಜಿನ್ನಾ ಅವರ ಹುಟ್ಟುಹಬ್ಬದ ದಿನದಂದು ಮಾನವೀಯ ನೆಲೆಯಲ್ಲಿ ತಾಯಿ ಮತ್ತು ಪತ್ನಿಯನ್ನು ಭೇಟಿಯಾಗಲು ಕಮಾಂಡರ್ ಜಾಧವ್‌ಗೆ ಪಾಕಿಸ್ತಾನ ಅನುಮತಿ ನೀಡಿದೆ’ ಎಂದು ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ, ವಿದೇಶಾಂಗ ವ್ಯವಹಾರಗಳ ಕಚೇರಿಯಲ್ಲಿನ ಸೋಫಾದಲ್ಲಿ ಅವಂತಿ ಮತ್ತು ಚೇತನ್‌ಕುಲ್ ಕುಳಿತಿರುವ ಚಿತ್ರವನ್ನು ಟ್ವೀಟ್ ಮಾಡಿದ್ದ ಅವರು, ‘ಜಾಧವ್ ಅವರ ತಾಯಿ ಮತ್ತು ಪತ್ನಿ ಸಚಿವಾಲಯದಲ್ಲಿ ನೆಮ್ಮದಿಯಾಗಿ ಕುಳಿತಿದ್ದಾರೆ. ನಮ್ಮ ಬದ್ಧತೆ ಬಗ್ಗೆ ಗೌರವವಿದೆ’ ಎಂದು ಹೇಳಿದ್ದರು.
ಜೆ.ಪಿ. ಸಿಂಗ್ ಮತ್ತು ಪಾಕಿಸ್ತಾನದ ಮಹಿಳಾ ಅಧಿಕಾರಿಯೊಬ್ಬರೊಂದಿಗೆ ಜಾಧವ್ ತಾಯಿ ಹಾಗೂ ಪತ್ನಿ ವಿದೇಶಾಂಗ ಇಲಾಖೆಯ ಪ್ರಧಾನ ಕಟ್ಟಡ ಪ್ರವೇಶಿಸುತ್ತಿರುವ ದೃಶ್ಯಗಳು ಟಿವಿ ವಾಹಿನಿಗಳಲ್ಲಿ ಪ್ರಸಾರವಾದವು.
ಮಾತುಕತೆ ನಡೆಸಿ ಹೊರ ಬಂದ ಅವಂತಿ ಮತ್ತು ಚೇತನ್‌ಕುಲ್ ಅವರು ಮಾಧ್ಯಮದ ಪ್ರತಿನಿಧಿಗಳಿಗೆ ವಂದಿಸಿದರು. ಆದರೆ, ಅವರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.
ನೇರವಾಗಿ ಹೈಕಮಿಷನ್ ಕಚೇರಿಗೆ:
ವಿಮಾನದಲ್ಲಿ ದುಬೈ ಮಾರ್ಗವಾಗಿ ಇಸ್ಲಾಮಾಬಾದ್‌ಗೆ ಬಂದಿಳಿದ ಇಬ್ಬರೂ ನೇರವಾಗಿ ಭಾರತೀಯ ಹೈಕಮಿಷನ್ ಕಚೇರಿಗೆ ತೆರಳಿದರು. ಅರ್ಧ ಗಂಟೆಯ ನಂತರ ಜೆ.ಪಿ. ಸಿಂಗ್ ಜತೆಗೂಡಿ ಜಾಧವ್ ಭೇಟಿಗೆ ತೆರಳಿದರು.
ಕುಟುಂಬದ ಸದಸ್ಯರು ಬರುವುದಕ್ಕೂ ಮೊದಲು ಜಾಧವ್ ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿದ್ದರು. ಅಲ್ಲಿಗೆ ಕರೆದುಕೊಂಡು ಬರುವುದಕ್ಕೂ ಮೊದಲು ಅವರು ಎಲ್ಲಿದ್ದರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಜಾಧವ್ ಅವರ ತಾಯಿ ಮತ್ತು ಪತ್ನಿಗೆ ಪಾಕಿಸ್ತಾನ ಡಿಸೆಂಬರ್ 20 ರಂದು ವೀಸಾ ನೀಡಿತ್ತು.
ಪ್ರಕರಣದ ಹಿನ್ನೆಲೆ:
ಬೇಹುಗಾರಿಕೆ, ಭಯೋತ್ಪಾದನೆ ನಡೆಸಿರುವ ಆರೋಪದಲ್ಲಿ 47 ವರ್ಷ ವಯಸ್ಸಿನ ಜಾಧವ್‌ಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ಈ ವರ್ಷದ ಏಪ್ರಿಲ್‌ನಲ್ಲಿ ಮರಣದಂಡನೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಮೇ ತಿಂಗಳಲ್ಲಿ ಭಾರತ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜಿ) ಅರ್ಜಿ ಸಲ್ಲಿಸಿತ್ತು.
ಅಲ್ಲದೇ, ತಮ್ಮ ವಾದ ಮಂಡಿಸಲು ಮತ್ತು ಭಾರತದ ದೂತಾವಾಸ ಸಂಪರ್ಕಿಸಲು ಜಾಧವ್‌ಗೆ ಪಾಕಿಸ್ತಾನ ಅವಕಾಶ ಕೊಟ್ಟಿಲ್ಲ ಎಂದು ಆರೋಪಿಸಿತ್ತು.
ಇದರ ವಿಚಾರಣೆ ನಡೆಸಿದ್ದ ಅಂತರರಾಷ್ಟ್ರೀಯ ನ್ಯಾಯಾಲಯ ಗಲ್ಲು ಶಿಕ್ಷೆ ಜಾರಿಗೆ ತಡೆ ನೀಡಿತ್ತು. ಇನ್ನಷ್ಟೇ ತೀರ್ಪು ಪ್ರಕಟಿಸಬೇಕಾಗಿದೆ.
ಇರಾನ್‌ನಿಂದ ಅಕ್ರಮವಾಗಿ ಪ್ರವೇಶಿಸಿದ ಜಾಧವ್ ಅಲಿಯಾಸ್ ಹುಸೇನ್ ಮುಬಾರಕ್ ಅವರನ್ನು ಹಿಂಸಾಪೀಡಿತ ಬಲೂಚಿಸ್ತಾನದಲ್ಲಿ ಬಂಧಿಸಲಾಗಿದೆ ಎಂದು ಪಾಕಿಸ್ತಾನ ಹೇಳುತ್ತಿದೆ.
ಈ ವಾದವನ್ನು ತಿರಸ್ಕರಿಸಿರುವ ಭಾರತ, ಇರಾನ್‌ನಲ್ಲಿ ಉದ್ಯಮ ನಡೆಸುತ್ತಿದ್ದ ಜಾಧವ್ ಅವರನ್ನು ಅಪಹರಿಸಲಾಗಿದೆ ಎಂದು ಆರೋಪಿಸಿದೆ.
ಕರೆತರಲು ಅಭಿಯಾನ ಮುಂದುವರಿಕೆ
ಮುಂಬೈ: ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರನ್ನು ವಾಪಸ್ ಕರೆತರಬೇಕು ಎಂದು ಒತ್ತಾಯಿಸಿ ನಡೆ
ಯುತ್ತಿರುವ ಅಭಿಯಾನ ಮುಂದುವರಿಯಲಿದೆ ಎಂದು ಅವರ ಸ್ನೇಹಿತರು ಹೇಳಿದ್ದಾರೆ.
ಆದರೆ, ಈಗ ಜಾಧವ್ ತಾಯಿ ಮತ್ತು ಪತ್ನಿಯನ್ನು ಭೇಟಿಯಾಗಿರುವುದರಿಂದ ಮುಂದೆ ಏನಾಗಲಿದೆ ಎಂಬ ಗೊಂದಲದಲ್ಲಿ ಹಿತೈಷಿಗಳಿದ್ದಾರೆ.
‘ಜಾಧವ್‌ನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೇಗಿದೆ ಎಂದು ತಿಳಿಯಲು ನಾವು ಬಯಸುತ್ತೇವೆ’ ಎಂದು ಸ್ನೇಹಿತರಲ್ಲಿ ಒಬ್ಬರಾಗಿರುವ ತುಳಸೀದಾಸ್ ಪವಾರ್ ಹೇಳಿದ್ದಾರೆ.
‘ಕನಿಷ್ಠ ಪಕ್ಷ ಜಾಧವ್ ಅವರನ್ನು ತಬ್ಬಿಕೊಳ್ಳಲು ತಾಯಿಗೆ ಅನುವುಮಾಡಿಕೊಡಬೇಕಿತ್ತು’ ಎಂದು ಅವರು ಹೇಳಿದ್ದಾರೆ.
‘ಕಾನೂನು ಹೋರಾಟ ಇರಲಿದೆ’
ನವದೆಹಲಿ: ಕುಲಭೂಷಣ್ ಜಾಧವ್ ಅವರಿಗೆ ನ್ಯಾಯ ಒದಗಿಸಲು ಭಾರತ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಹೋರಾಟ ಮುಂದುವರಿಸಲಿದೆ.
ಪಾಕಿಸ್ತಾನದ ಸೇನಾ ನ್ಯಾಯಾಲಯ ಪ್ರಹಸನದ ರೀತಿ ಸುಳ್ಳು ಆರೋಪಗಳ ಆಧಾರದಲ್ಲಿ ಜಾಧವ್‌ಗೆ ಮರಣದಂಡನೆ ವಿಧಿಸಿದೆ ಎಂಬ ತನ್ನ ನಿಲುವಿಗೆ ಭಾರತ ಬದ್ಧವಾಗಿದೆ ಎಂದು ಮೂಲಗಳು ಹೇಳಿವೆ.
ಗಲ್ಲು ಶಿಕ್ಷೆಯ ವಿರುದ್ಧ ಭಾರತ ಐಸಿಜೆಯಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೊಸ ವರ್ಷದ ಆರಂಭದಲ್ಲಿ ನಡೆಯುವ ನಿರೀಕ್ಷೆ ಇದೆ.
* ಮಾನವೀಯತೆ ಮತ್ತು ಇಸ್ಲಾಂನ ಆಧಾರದಲ್ಲಿ ಜಾಧವ್ ಅವರಿಗೆ ಕುಟುಂಬದ ಭೇಟಿಗೆ ಅವಕಾಶ ನೀಡಲಾಗಿದೆ
– ಮೊಹಮ್ಮದ್ ಫೈಸಲ್, ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.