ADVERTISEMENT

ಸುಯೆಜ್‌ ಕಾಲುವೆಯಲ್ಲಿ ಕೆಟ್ಟು ನಿಂತು ಆತಂಕ ಮೂಡಿಸಿದ ತೈಲ ಸಾಗಣೆ ಹಡಗು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜೂನ್ 2023, 11:12 IST
Last Updated 4 ಜೂನ್ 2023, 11:12 IST
ಕೆಟ್ಟುನಿಂತಿರುವ ಹಡಗು
ಕೆಟ್ಟುನಿಂತಿರುವ ಹಡಗು   

ಸುಯೆಜ್: ಜಾಗತಿಕ ಜಲ ಮಾರ್ಗ ಈಜಿಪ್ಟ್‌ನ ಸುಯೆಜ್ ಕಾಲುವೆಯ ಏಕ-ಪಥದಲ್ಲಿ ಭಾನುವಾರ ತೈಲ ಟ್ಯಾಂಕರ್‌ವೊಂದು ಯಾಂತ್ರಿಕ ದೋಷದಿಂದ ಕೆಟ್ಟು ನಿಂತು ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೀಗಾಗಿ, ವಿಶ್ವ ಮಟ್ಟದಲ್ಲಿ ಆತಂಕ ಎದುರಾಗಿತ್ತು.

ಮಾಲ್ಟಾದ ತೈಲ ಸಾಗಣೆ ಹಡಗು ‘ಸೀವಿಗೋರ್’ ಸುಯೆಜ್‌ ಕಾಲುವೆಯ 12ನೇ ಕಿಲೋಮೀಟರ್‌ನಲ್ಲಿ ಯಾಂತ್ರಿಕ ದೋಷದಿಂದ ಕೆಟ್ಟುನಿಂತಿತ್ತು ಎಂದು ಸುಯೆಜ್ ಕಾಲುವೆ ಪ್ರಾಧಿಕಾರದ ವಕ್ತಾರ ಜಾರ್ಜ್ ಸಫ್ವಾತ್ ಹೇಳಿದ್ದಾರೆ.

ಟ್ಯಾಂಕರ್ ಅನ್ನು ಕಾಲುವೆಯ ದ್ವಿಪಥದ ಭಾಗಕ್ಕೆ ಎಳೆಯಲು ಮೂರು ಟಗ್‌ಬೋಟ್‌ಗಳನ್ನು ನಿಯೋಜಿಸಲಾಯಿತು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ತೈಲ ಟ್ಯಾಂಕರ್‌ ಅನ್ನು ಬೇರೆಡೆಗೆ ಎಳೆದು, ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಹಡಗಿನ ದುರಸ್ಥಿ ಕಾರ್ಯ ನಡೆಯುತ್ತಿದೆ ಎಂದು ಕಾಲುವೆ ಪ್ರಾಧಿಕಾರ ಹೇಳಿದೆ.

ADVERTISEMENT

ತೈಲ ಟ್ಯಾಂಕರ್‌ ಮೆಡಿಟರೇನಿಯನ್ ಸಮುದ್ರದಿಂದ ಕೆಂಪು ಸಮುದ್ರದ ಕಡೆಗೆ ಪ್ರಯಾಣಿಸುತ್ತಿತ್ತು.

2021ರಲ್ಲಿ ‘ಎವರ್ ಗಿವನ್’ ಹಡಗು ಸುಯೆಜ್‌ ಕಾಲುವೆಯಲ್ಲಿ ಸಿಲುಕಿದ್ದರಿಂದ ಒಂದು ವಾರ ಹಡುಗುಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ವಿಶ್ವದ ಪ್ರಮುಖ ಸರಕುಸಾಗಣೆ ಜಲಮಾರ್ಗಗಳಲ್ಲಿ ಉಂಟಾದ ಅಡಚಣೆಯು ಜಾಗತಿಕ ವಹಿವಾಟಿನ ಮೇಲೆ ಪರಿಣಾಮ ಬೀರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.