ನವದೆಹಲಿ (ಏಜೆನ್ಸೀಸ್): 13 ವರ್ಷಗಳ ಹಿಂದೆ ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನ ಸೇರಿದ್ದ ಭಾರತದ ಯುವತಿ ಗೀತಾ ಅವರನ್ನು ಅವರ ಪೋಷಕರೊಂದಿಗೆ ಸೇರಿಸುವ ಕಾರ್ಯಕ್ಕೆ ಭಾರತ ಸರ್ಕಾರ ಮುಂದಾಗಿದೆ.
‘ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಡಾ. ಟಿ.ಸಿ.ಎ. ರಾಘವನ್ ಅವರು ತಮ್ಮ ಪತ್ನಿಯೊಂದಿಗೆ ಯುವತಿಯನ್ನು ಭೇಟಿ ಮಾಡುವಂತೆ ತಿಳಿಸಿದ್ದೇನೆ’ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಯುವತಿಯ ಪೋಷಕರ ಹುಡುಕಾಟದಲ್ಲಿರುವ ಪಾಕಿಸ್ತಾನದ ಮಾನವ ಹಕ್ಕು ರಕ್ಷಣಾ ಕಾರ್ಯಕರ್ತ ಮತ್ತು ಮಾಜಿ ಸಚಿವ ಅನ್ಸರ್ ಬರ್ನಿ ಅವರ ಮನವಿಯ ಟ್ವೀಟ್‌ಗೆ ಸುಷ್ಮಾ ಪ್ರತಿಕ್ರಿಯಿಸಿದ್ದಾರೆ.
ಯುವತಿಯ ಪೋಷಕರನ್ನು ಹುಡುಕಲು ಅನ್ಸರ್ ಬರ್ನಿ ಫೇಸ್‌ಬುಕ್ ಮೂಲಕ ಅಭಿಯಾನ ಆರಂಭಿಸಿದ್ದಾರೆ. ಮೂಕ ಹಾಗೂ ಕಿವುಡ ಯುವತಿ ಗೀತಾ ಸ್ವದೇಶಕ್ಕೆ ಹಿಂತಿರುಗಲು ನಡೆಸಿದ ಪ್ರಯತ್ನಗಳು ವಿಫಲವಾಗಿ ಸದ್ಯಕ್ಕೆ ಪಾಕಿಸ್ತಾನದಲ್ಲೇ ನೆಲೆಸಿದ್ದಾರೆ.
23 ವರ್ಷದ ಈ ಯುವತಿ ಪಾಕಿಸ್ತಾನದ ಕರಾಚಿಯ ಸಮಾಜ ಕಲ್ಯಾಣ ಸಂಘಟನೆ ಈಧಿ ಫೌಂಡೇಷನ್‌ನಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿಯೇ ಯುವತಿಗೆ ‘ಗೀತಾ’ ಎಂದು ನಾಮಕರಣ ಮಾಡಲಾಗಿದೆ.
ಈ ಘಟನೆಯನ್ನು ಸಲ್ಮಾನ್ ಖಾನ್ ಅಭಿನಯದ ‘ಬಜರಂಗಿ ಭಾಯಿಜಾನ್’ ಚಿತ್ರದ ಕತೆಯೊಂದಿಗೆ ಹೋಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.