ಲಂಡನ್ (ಪಿಟಿಐ): ಹೊರರಾಷ್ಟ್ರಗಳಲ್ಲಿ ಅಧ್ಯಯನ ಮಾಡಿದ ನೊಬೆಲ್ ಪುರಸ್ಕೃತರ ಪೈಕಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನವರು ಇಂಗ್ಲೆಂಡ್‌ನ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದವರು ಎಂದು ಬ್ರಿಟಿಷ್ ಕೌನ್ಸಿಲ್ ನಡೆಸಿದ ಅಧ್ಯಯನ ವರದಿ ಹೇಳಿದೆ.
ಈ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕೃತರಲ್ಲಿ 50 ಮಂದಿ ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ಸೇರಿದಂತೆ ಇಂಗ್ಲೆಂಡ್‌ನ ಪ್ರಮುಖ ವಿ.ವಿ.ಗಳ ವಿದ್ಯಾರ್ಥಿಗಳಾಗಿದ್ದಾರೆ. ಮುಖ್ಯವಾಗಿ ಇದುವರೆಗಿನ ನೊಬೆಲ್ ಪುರಸ್ಕೃತರಲ್ಲಿ ಅಮೆರಿಕ ಮತ್ತು ಜರ್ಮನಿಗಿಂತಲೂ ಇಂಗ್ಲೆಂಡ್ ವಿ.ವಿ.ಗಳಲ್ಲಿ ಕಲಿತವರೇ ಹೆಚ್ಚು ಇದ್ದಾರೆ ಎಂದು ಅಧ್ಯಯನ ತಿಳಿಸಿದೆ.
ಜಾಗತಿಕ ಪ್ರತಿಷ್ಠೆ ಮತ್ತು ಶೈಕ್ಷಣಿಕ ಉತ್ಕೃಷ್ಟತೆಯ ಕಾರಣ ವಿದ್ಯಾರ್ಥಿಗಳು ಇಂಗ್ಲೆಂಡ್‌ನತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಬ್ರಿಟಿಷ್ ಕೌನ್ಸಿಲ್‌ನ ಶಿಕ್ಷಣ ಮತ್ತು ಸಮಾಜ ವಿಭಾಗದ ನಿರ್ದೇಶಕಿ ಡಾ. ಜೊ ಬಿಯಲ್ ಹೇಳಿದ್ದಾರೆ.
‘ಬ್ರಿಟಿಷ್ ಕೌನ್ಸಿಲ್ ಹಳೆಯ ವಿದ್ಯಾರ್ಥಿಗಳ ಸಾಧನೆಯನ್ನು ಸಂಭ್ರಮಿಸುತ್ತದೆ. ಅವರ ಪಯಣ ವಿಶ್ವವಿದ್ಯಾಲಯಗಳ ಶಿಕ್ಷಣದಿಂದ ಪ್ರಾರಂಭವಾಗಿವೆ. ಅದನ್ನು ಕಂಡುಹಿಡಿಯುವುದೇ ರೋಮಾಂಚಕ ಸಂಗತಿ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.