ನ್ಯೂಯಾರ್ಕ್ (ಐಎಎನ್‌ಎಸ್/ ಇಎಫ್‌ಇ): ಮನುಷ್ಯನ ದೇಹದ ಕಣಕಣದಲ್ಲಿರುವ ಡಿಎನ್ಎ ಸ್ವರೂಪ ಹೇಗಿದೆ ಎಂಬುದನ್ನು ಪತ್ತೆ ಹಚ್ಚಿ ೧೯೬೨ ರಲ್ಲಿ ವೈದ್ಯಕೀಯ ನೊಬೆಲ್ ಪ್ರಶಸ್ತಿ ಪಡೆದ ಖ್ಯಾತ ವಿಜ್ಞಾನಿ ಜೇಮ್ಸ್ ವ್ಯಾಟ್ಸನ್ ತಮ್ಮ ನೊಬೆಲ್ ಪದಕವನ್ನು ಹರಾಜು ಹಾಕಿದ್ದಾರೆ. ನ್ಯೂಯಾರ್ಕಿನ ಹೆಸರಾಂತ ಕ್ರಿಸ್ಟೀಸ್ ಹರಾಜುಕಟ್ಟೆಯಲ್ಲಿ ನೊಬೆಲ್ ಪದಕವು 47.5 ಲಕ್ಷ ಅಮೆರಿಕನ್ ಡಾಲರ್‌ಗೆ (ಸುಮಾರು ರೂ. ೨೯ ಕೋಟಿಗೆ ) ಹರಾಜಾಗಿದೆ.
ಹರಾಜಿನಲ್ಲಿ ಮಾರಾಟವಾದ ಯಾವುದೇ ನೊಬೆಲ್ ಪದಕಕ್ಕೆ ಇಷ್ಟೊಂದು ಬೆಲೆ ಸಿಕ್ಕಿರಲಿಲ್ಲ. ವ್ಯಾಟ್ಸನ್ ಪದಕ ವಿಶ್ವದಾಖಲೆ ಸೃಷ್ಟಿಸಿದೆ.
ಪದಕವನ್ನು ಉದ್ಯಮಿಯೊಬ್ಬರು ಖರೀದಿಸಿದ್ದಾರೆ. ನೊಬೆಲ್ ಪಡೆದ ವಿಜ್ಞಾನಿ ಜೀವಂತವಾಗಿರುವಾಗಲೇ ಪದಕವನ್ನು ಹರಾಜು ಮಾಡಿರುವ ಮೊದಲ ಪ್ರಕರಣ ಇದಾಗಿದೆ.
‘ಪದಕದ ಆರಂಭದ ಹರಾಜು ಬೆಲೆ 15 ಲಕ್ಷ ಅಮೆರಿಕನ್ ಡಾಲರ್ (ಸುಮಾರು ರೂ. ೯ ಕೋಟಿ) ಇತ್ತು. ಕೊನೆಗೆ ಇದು 47.5 ಲಕ್ಷ ಡಾಲರ್‌ಗೆ ಏರಿತು’ ಎಂದು ಕ್ರಿಸ್ಟೀಸ್‌ನ ನಿರ್ದೇಶಕ ಫ್ರಾನ್ಸಿಸ್ ವಾಹ್ಲ್‌ರೆನ್ ಹೇಳಿದ್ದಾರೆ.
ನೊಬೆಲ್ ಪದಕ ಪಡೆಯುವ ಸಮಾರಂಭಕ್ಕೆ ವ್ಯಾಟ್ಸನ್ ಸಿದ್ಧಪಡಿಸಿದ್ದ ಭಾಷಣದ ಕೈ ಬರಹದ ಪ್ರತಿಯು ಹರಾಜಿನಲ್ಲಿ 3.65 ಲಕ್ಷ
ಡಾಲರ್‌ಗೆ (ಸುಮಾರು ರೂ.2.15 ಕೋಟಿ) ಬಿಕರಿಯಾಯಿತು ಎಂದು ಕ್ರಿಸ್ಟಿ ತಿಳಿಸಿದೆ.
ಷಿಕಾಗೊದಲ್ಲಿ ೧೯೨೮ರಲ್ಲಿ ಜನಿಸಿದ ವ್ಯಾಟ್ಸನ್, ಫ್ರಾನ್ಸಿಸ್ ಕ್ರಿಕ್ ಮತ್ತು ಮೌರಿಸ್ ವಿಲ್ಕಿನ್ಸ್ ಜತೆ ಡಿಎನ್ಎ ಅಧ್ಯಯನಕ್ಕಾಗಿ ನೊಬೆಲ್ ಪಡೆದಿದ್ದರು. ಹರಾಜಿನಿಂದ ಬಂದ ಹಣವನ್ನು ಶಿಕ್ಷಣ ಸಂಸ್ಥೆಗಳಿಗೆ ನೀಡುವುದಾಗಿ ವ್ಯಾಟ್ಸನ್ ಹೇಳಿದ್ದಾರೆ. ಶ್ವೇತವರ್ಣೀಯರ ಬುದ್ಧಿಮತ್ತೆ ಕಪ್ಪು ವರ್ಣೀಯರ ಬುದ್ಧಿಮತ್ತೆಗಿಂತ ಹೆಚ್ಚಿನದ್ದೆಂದು ಉಪನ್ಯಾಸವೊಂದರಲ್ಲಿ ವ್ಯಾಟ್ಸನ್ ೨೦೦೭ ರಲ್ಲಿ ಹೇಳಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.