ADVERTISEMENT

ಬಾಂಗ್ಲಾದಲ್ಲಿ 15 ಹಿಂದೂ ದೇವಾಲಯಗಳ ಧ್ವಂಸ

ಫೇಸ್‌ಬುಕ್‌ನಲ್ಲಿ ಇಸ್ಲಾಂ ವಿರುದ್ಧ ನಿಂದನೆ

ಪಿಟಿಐ
Published 31 ಅಕ್ಟೋಬರ್ 2016, 19:30 IST
Last Updated 31 ಅಕ್ಟೋಬರ್ 2016, 19:30 IST
ಢಾಕಾ: ಇಸ್ಲಾಂ ಧರ್ಮದ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನಿಂದನೆಯ ಬರಹ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಬಾಂಗ್ಲಾದೇಶದಲ್ಲಿ ಕನಿಷ್ಠ 15 ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ.
 
ಬ್ರಹ್ಮಾನ್‌ಬರಿಯಾ ಜಿಲ್ಲೆಯ ನಾಸಿರ್‌ನಗರದಲ್ಲಿನ ದೇವಾಲಗಳನ್ನು ಧ್ವಂಸ ಮಾಡಲಾಗಿದೆ. ಹಿಂದೂಗಳ ಸುಮಾರು 100 ಮನೆಗಳನ್ನು ಭಾನುವಾರ ಲೂಟಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಸಮೀಪದ ಹಬಿಗಂಜ್ ಮತ್ತು ಮಾಧವ್‌ಪುರದ ದೇವಾಲಯಗಳಿಗೂ ಹಾನಿ ಮಾಡಿಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಪೊಲೀಸರು ತಿಳಿಸಿದ್ದಾರೆ.
 
ಗಲಭೆಯಲ್ಲಿ ಯಾರಿಗೂ ಪ್ರಾಣ ಹಾನಿಯಾಗಿಲ್ಲ. ಆದರೆ, ಅನೇಕ ಅರ್ಚಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಘಟನೆಗೆ ಸಂಬಂಧಿಸಿ ಇದುವರೆಗೆ 9 ಮಂದಿಯನ್ನು ಬಂಧಿಸಲಾಗಿದೆ. ಎರಡು ದೇವಾಲಗಳ ಆಡಳಿತ ಮಂಡಳಿಯವರು ದೂರು ನೀಡಿದ್ದಾರೆ’ ಎಂದು ಬ್ರಹ್ಮಾನ್‌ಬರಿಯಾ ಪೊಲೀಸ್ ಸೂಪರಿಂಟೆಂಡೆಂಟ್ ಮಿಜಾನುರ್ ರೆಹಮಾನ್ ಅವರು ತಿಳಿಸಿದ್ದಾರೆ.
 
‘ಹರಿನ್‌ಬೇರ್‌ ಗ್ರಾಮದ ರಾಸ್‌ರಾಜ್‌ ದಾಸ್‌ ಎಂಬಾತ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಬರಹ ಪೋಸ್ಟ್‌ ಮಾಡಿದ ಬಳಿಕ ಈ ದಾಳಿ ನಡೆದಿದೆ’ ಎಂದು ನಾಸಿರ್‌ ನಗರ ನಿವಾಸಿಗಳು ತಿಳಿಸಿದ್ದಾರೆ.
 
‘ಅವಹೇಳನಕಾರಿ ಬರಹ ಪೋಸ್ಟ್‌ ಮಾಡಿದ ಆರೋಪದಲ್ಲಿ  ಶುಕ್ರವಾರವೇ  ರಾಸ್‌ರಾಜ್‌ ದಾಸ್‌ನನ್ನು ಆತನನ್ನು ಬಂಧಿಸಲಾಗಿತ್ತು’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
 
‘ಮುಸ್ಲಿಂ, ಹಿಂದೂ ಸಮುದಾಯದವರು ಮತ್ತು ಸಮಾಜದ ಮುಖಂಡರು ಶಾಂತಿ ರ್‍ಯಾಲಿ ನಡೆಸಿದ್ದು, ಸದ್ಯ ಪರಿಸ್ಥಿತಿ ಶಾಂತವಾಗಿದೆ’ ಎಂದು  ತಿಳಿಸಿದ್ದಾರೆ. ತಕ್ಷಣವೇ ಗಲಭೆ ನಿಯಂತ್ರಿಸಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗಿದೆ. ನಿಸಾರ್‌ನಗರದಲ್ಲಿ ಅರೆಸೇನಾ ಪಡೆಯ ಯೋಧರನ್ನು ನಿಯೋಜಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.