ಢಾಕಾ (ಪಿಟಿಐ): ನೊಬೆಲ್ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಯೂನುಸ್ ಅವರು ತಮ್ಮನ್ನು ಬಾಂಗ್ಲಾ ದೇಶದ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸ್ಥಾನದಿಂದ ಪದಚ್ಯುತಗೊಳಿಸಿರುವ ಕೇಂದ್ರೀಯ ಬ್ಯಾಂಕ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅಂತಿಮ ಮೇಲ್ಮನವಿಯನ್ನು ಇಲ್ಲಿನ ಸುಪ್ರೀಂ ಕೋರ್ಟ್ ಮಂಗಳವಾರ ತಳ್ಳಿಹಾಕಿದೆ.
ಏಳು ಮಂದಿ ನ್ಯಾಯಮೂರ್ತಿಗಳನ್ನೊಳಗೊಂಡ ಪೀಠದ ಅಧ್ಯಕ್ಷರಾದ ಮುಖ್ಯ ನ್ಯಾಯಮೂರ್ತಿ ಎ ಬಿ ಎಂ ಖೈರುಲ್ ಹಕ್ ಅವರು ‘ಅಂತಿಮ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಲಾಗಿದೆ’ ಎಂದು ಹೇಳಿದ್ದಾರೆ.
ಈ ಮೂಲಕ ಯೂನುಸ್ ಅವರನ್ನು ಪದಚ್ಯುತಗೊಳಿಸಿರುವ ಕೇಂದ್ರೀಯ ಬ್ಯಾಂಕ್‌ನ ಕ್ರಮ ಸರಿಯಾಗಿದೆ ಎಂದು ತೀರ್ಪು ನೀಡಿದ್ದ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಯೂನುಸ್ ಅವರನ್ನು ಪದಚ್ಯುತಗೊಳಿಸಿದ ಕ್ರಮವು ಅಂತರ ರಾಷ್ಟ್ರೀಯವಾಗಿ ಟೀಕೆಗೆ ಒಳಗಾಗಿತ್ತು. ಈ ವಿವಾದವನ್ನು ಸೌಹಾರ್ದವಾಗಿ ಬಗೆಹರಿಸಿಕೊಂಡುಯೂನುಸ್ ಅವರನ್ನು ಪುನರ್ ನೇಮಕ ಮಾಡುವಂತೆ ಅಮೆರಿಕ ಸೇರಿದಂತೆ ಬಾಂಗ್ಲಾದ ಇನ್ನಿತರ ಮಿತ್ರ ರಾಷ್ಟ್ರಗಳು ಒತ್ತಡ ಹೇರಿದ್ದವು. ಈ ಹಿನ್ನೆಲೆಯಲ್ಲಿ ವಿವಾದವನ್ನು ನ್ಯಾಯಾಲಯದ ಆಚೆ ಸಕಾರಾತ್ಮವಾಗಿ ಬಗೆಹರಿಸಿಕೊಳ್ಳಲು ಕಳೆದ ಒಂದು ವಾರದಿಂದ ಪ್ರಯತ್ನಗಳು ನಡೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.