ADVERTISEMENT

ಬಾಗ್ದಾದಿ ಸಾವಿನ ಶಂಕೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2015, 19:30 IST
Last Updated 27 ಏಪ್ರಿಲ್ 2015, 19:30 IST

ಟೆಹ್ರಾನ್‌: ಇಸ್ಲಾಮಿಕ್‌ ಸ್ಟೇಟ್‌ (ಐ.ಎಸ್‌) ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಅಬುಬಕರ್‌ ಅಲ್‌ ಬಾಗ್ದಾದಿ ಮೃತಪಟ್ಟಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರೇಡಿಯೊ ಇರಾನ್‌ನಲ್ಲಿ ಪ್ರಕಟವಾದ ಸುದ್ದಿಯನ್ನು ಉಲ್ಲೇಖಿಸಿ ಆಲ್‌ ಇಂಡಿಯಾ ರೇಡಿಯೊ ಟ್ವೀಟ್‌ ಮಾಡಿದ್ದು, ‘ಐಎಸ್‌ಐಎಸ್‌ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಅಬುಬಕರ್‌ ಅಲ್‌ ಬಾಗ್ದಾದಿ ಮೃತಪಟ್ಟಿದ್ದಾನೆ’ ಎಂದು ಹೇಳಿದೆ.  ರೇಡಿಯೊ ಇರಾನ್‌ ಪ್ರಕಾರ, ಗೋಲನ್‌ ಹೈಟ್ಸ್‌ನಲ್ಲಿರುವ ಇಸ್ರೇಲಿ ಆಸ್ಪತ್ರೆಯೊಂದರಲ್ಲಿ ಈತ ಮೃತಪಟ್ಟಿದ್ದಾನೆ. ಆದರೆ ಈ ವರದಿಯನ್ನು ಈ ವರೆಗೆ ಯಾರೂ ದೃಢೀಕರಿಸಿಲ್ಲ.

‘ದ ಗಾರ್ಡಿಯನ್‌’ ಪತ್ರಿಕೆ ಕಳೆದ ವಾರವೇ ಬಾಗ್ದಾದಿಗೆ ಅಮೆರಿಕ ವಾಯುದಾಳಿಯಲ್ಲಿ ಗಂಭೀರ ಗಾಯಗಳಾಗಿವೆ ಎಂದು ವರದಿ ಮಾಡಿತ್ತು. ಮಾರ್ಚ್‌ನಲ್ಲಿ ನಡೆದ ವಾಯುದಾಳಿಯಲ್ಲಿ ಬಾಗ್ದಾದಿ ಗಾಯಗೊಂಡಿದ್ದ ಎಂದು ಪತ್ರಿಕೆ ಹೇಳಿತ್ತು.  ಗಾಯಗೊಂಡಿದ್ದರಿಂದ ಐ.ಎಸ್‌ನ ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳುವುದಕ್ಕೂ ಆತನಿಗೆ ಸಾಧ್ಯವಾಗುತ್ತಿಲ್ಲ ಎಂದು ವರದಿ ವಿವರಿಸಿತ್ತು.

ಬಾಗ್ದಾದಿಯ ನಂತರದ ಸ್ಥಾನದಲ್ಲಿದ್ದ ಅಬು ಅಲಾ ಅಫ್ರಿ ಎಂಬ ಮಾಜಿ ಭೌತಶಾಸ್ತ್ರ ಶಿಕ್ಷಕ ಐ.ಎಸ್‌ನ ನೇತೃತ್ವ ವಹಿಸಿಕೊಂಡಿದ್ದಾನೆ ಎಂಬ ವರದಿಗಳೂ ಪ್ರಕಟವಾಗಿದ್ದವು. ಆದರೆ ಇದನ್ನು ಐ.ಎಸ್‌ನ ವಕ್ತಾರ ನಿರಾಕರಿಸಿದ್ದ. ಅನ್ಬರ್‌ ಪ್ರಾಂತ್ಯದಲ್ಲಿ ನಡೆಯುತ್ತಿರುವ ಯುದ್ಧದ ನೇತೃತ್ವವನ್ನು ಬಾಗ್ದಾದಿ ವಹಿಸಿಕೊಂಡಿದ್ದಾನೆ ಎಂದು ಆತ ಹೇಳಿದ್ದ.

ಅಮೆರಿಕ ನೇತೃತ್ವದ ವಾಯು ದಾಳಿಯಲ್ಲಿ ಬಾಗ್ದಾದಿ ಮೃತಪಟ್ಟಿದ್ದಾನೆ ಎಂದು ಕಳೆದ ವರ್ಷವೂ ಮಾಧ್ಯಮಗಳು ವರದಿ ಮಾಡಿದ್ದವು. ಅದನ್ನು ಕೂಡ ದೃಢಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಮಾರ್ಚ್‌ 18ರಂದು ಸಿರಿಯಾ ಗಡಿಯಲ್ಲಿನ ನಿನೆವಾಹ್‌ ಪ್ರಾಂತ್ಯದಲ್ಲಿ ನಡೆಸಲಾದ ವಾಯು ದಾಳಿಯಲ್ಲಿ ಐ.ಎಸ್‌ ಮುಖ್ಯಸ್ಥ ಗಾಯಗೊಂಡಿದ್ದಾನೆ ಎಂಬುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಅಮೆರಿಕ ಕೂಡ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.