ADVERTISEMENT

ಬ್ರಹ್ಮಪುತ್ರ ಉಪನದಿಗೆ ಚೀನಾ ಅಣೆಕಟ್ಟೆ: ಭಾರತ ಆತಂಕ

ಪಿಟಿಐ
Published 1 ಅಕ್ಟೋಬರ್ 2016, 19:30 IST
Last Updated 1 ಅಕ್ಟೋಬರ್ 2016, 19:30 IST

ಬೀಜಿಂಗ್ :  ಟಿಬೆಟ್‌ನಲ್ಲಿ ಬ್ರಹ್ಮಪುತ್ರ ಉಪ ನದಿಗೆ ಅಡ್ಡಲಾಗಿ ಚೀನಾವು ಅಣೆಕಟ್ಟೆ ನಿರ್ಮಿಸಿ ಭಾರಿ ವೆಚ್ಚದ  ಜಲ ವಿದ್ಯುತ್‌ ಯೋಜನೆ ಕಾರ್ಯಗತ ಮಾಡುತ್ತಿರುವುದರಿಂದ ನೀರಿನ ಹರಿವು ಕಡಿಮೆ ಆಗಲಿದೆ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ.

ಯಾರ್ಲುಂಗ್ ಝಾಂಗ್ಬೊ (ಬ್ರಹ್ಮಪುತ್ರ ನದಿಗೆ ಟಿಬೇಟ್ ಹೆಸರು) ನದಿಯ ಉಪ ನದಿಯಾದ ಕ್ಸಿಯಾಬ್ಕುಗೆ ಟಿಬೇಟಿನ ಕ್ಸಿಗಝೆ ಎಂಬಲ್ಲಿ ಜಲ ವಿದ್ಯುತ್ ಯೋಜನೆಯನ್ನು ಚೀನಾ ಆರಂಭಿಸಿದೆ. ಇದಕ್ಕೆ ₹ 4900 ಕೋಟಿ ವೆಚ್ಚವಾಗುವ ಅಂದಾಜು ಇದೆ ಎಂದು ಯೋಜನೆಯ ಆಡಳಿತ ನಿರ್ವಹಣಾ ವಿಭಾಗದ ಮುಖ್ಯಸ್ಥ ಝಾಂಗ್ ಯೂನಬಾವೊ ತಿಳಿಸಿದ್ದಾರೆ.

ಕ್ಸಿಗಝೆಯು ಸಿಕ್ಕಿಂಗೆ ಸನಿಹದಲ್ಲಿದೆ. ಕ್ಸಿಗಝೆಯಿಂದ ಬ್ರಹ್ಮಪುತ್ರಾ ನದಿಯು ಅರುಣಾಚಲ ಪ್ರದೇಶಕ್ಕೆ ಹರಿಯುತ್ತದೆ. ಭಾರೀ ವೆಚ್ಚದ ಲಾಲ್ಹೊ  ಜಲವಿದ್ಯುತ್‌ ಯೋಜನೆ 2014ರ ಜೂನ್‌ ನಲ್ಲಿ ಆರಂಭಗೊಂಡಿದ್ದು 2019ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಕಳೆದ ವರ್ಷ ಚೀನಾವು ಟಿಬೆಟ್‌ನ ಅತ್ಯಂತ ದೊಡ್ಡ ಝಾಮ್‌ ಜಲವಿದ್ಯುತ್‌ ಯೋಜನೆಯನ್ನು ಬ್ರಹ್ಮಪುತ್ರ ನದಿ ಮೂಲಕ ಕಾರ್ಯಾರಂಭಗೊಳಿಸಿತ್ತು.  ಈ ಯೋಜನೆಗೆ ₹ 9900 ಕೋಟಿ  ವೆಚ್ಚ ತಗುಲಿದೆ ಎನ್ನಲಾಗಿದೆ. ಈ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿತ್ತು.

ಆದರೆ, ಭಾರತದ ಆತಂಕವನ್ನು ನಿರಾಕರಿಸಿರುವ ಚೀನಾ,  ನೀರಿನ ಹರಿವಿಗೆ ಅಡ್ಡಿಯಾಗದ ರೀತಿಯಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ ಎಂದು  ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.