ADVERTISEMENT

ಭಾರತದ ಮಾನುಷಿ ಛಿಲ್ಲರ್‌ಗೆ ‘ವಿಶ್ವ ಸುಂದರಿ’ ಕಿರೀಟ

ಏಜೆನ್ಸೀಸ್
Published 18 ನವೆಂಬರ್ 2017, 20:15 IST
Last Updated 18 ನವೆಂಬರ್ 2017, 20:15 IST
ಮಾನುಷಿ ಛಿಲ್ಲಾರ್  ಕೃಪೆ: ಫೆಮಿನಾ ಮಿಸ್ ಇಂಡಿಯಾ ಟ್ವಿಟರ್ ಖಾತೆ
ಮಾನುಷಿ ಛಿಲ್ಲಾರ್ ಕೃಪೆ: ಫೆಮಿನಾ ಮಿಸ್ ಇಂಡಿಯಾ ಟ್ವಿಟರ್ ಖಾತೆ   

ಬೀಜಿಂಗ್‌: ಚೀನಾದಲ್ಲಿ ಶನಿವಾರ ರಾತ್ರಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ಮಾನುಷಿ ಛಿಲ್ಲರ್‌ ‘ವಿಶ್ವ ಸುಂದರಿ’ಯಾಗಿ ಆಯ್ಕೆಯಾಗಿದ್ದಾರೆ.

ಪ್ರಿಯಾಂಕಾ ಛೋಪ್ರಾ 2000ರಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾದ 17 ವರ್ಷಗಳ ನಂತರ ಮಾನುಷಿ ಮೂಲಕ ಭಾರತಕ್ಕೆ ಈ ಅದೃಷ್ಟ ಒಲಿದು ಬಂದಿದೆ.

ಹರಿಯಾಣದ ವೈದ್ಯಕೀಯ ವಿದ್ಯಾರ್ಥಿನಿ ಮಾನುಷಿ (20) ಇದೇ ಮೇ ತಿಂಗಳಲ್ಲಿ ನಡೆದಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸ್‌ ಇಂಡಿಯಾ’ ಆಗಿ ಆಯ್ಕೆಯಾಗಿದ್ದರು.

ADVERTISEMENT

ಸಾನ್ಯಾ ಸಿಟಿ ನಗರದಲ್ಲಿ ನಡೆದ ಅಂತಿಮ ಸುತ್ತಿನಲ್ಲಿ ಇಂಗ್ಲೆಂಡ್‌, ಫ್ರಾನ್ಸ್‌, ಕೀನ್ಯಾ ಮತ್ತು ಮೆಕ್ಸಿಕೊದ ಸುಂದರಿಯರು ಒಡ್ಡಿದ ತೀವ್ರ ಪೈಪೋಟಿ ಎದುರಿಸಿ ಮಾನುಷಿ ಕಿರೀಟ ಮುಡಿಗೇರಿಸಿಕೊಂಡರು.

ಮಿಸ್‌ ಇಂಗ್ಲೆಂಡ್‌ ಸ್ಟೆಫಾನಿ ಹಿಲ್‌ ಮೊದಲ ರನ್ನರ್‌ ಅಪ್‌ ಮತ್ತು ಮಿಸ್‌ ಮೆಕ್ಸಿಕೊ ಆ್ಯಂಡ್ರಿಯಾ ಮೆಝಾ ಎರಡನೇ ರನ್ನರ್‌ ಅಪ್‌ ಸ್ಥಾನ ಗಳಿಸಿದರು. ಮಾನುಷಿ ತಂದೆ– ತಾಯಿ ಇಬ್ಬರೂ ವೈದ್ಯರಾಗಿದ್ದಾರೆ.

108 ಸುಂದರಿಯರನ್ನು ಹಿಂದಿಕ್ಕಿ ಮಾನುಷಿ ಈ ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈವರೆಗಿನ ವಿಶ್ವಸುಂದರಿ ಸ್ಪರ್ಧೆಯಲ್ಲಿ ಆಯ್ಕೆಯಾದ ಆರನೇ ಭಾರತೀಯ ಮಹಿಳೆ ಮಾನುಷಿ.

ಈ ಸ್ಪರ್ಧೆಯಲ್ಲಿ ಬ್ಯೂಟಿ ವಿತ್ ಎ ಪರ್ಪಸ್ ಎಂಬ ಪಟ್ಟವನ್ನೂ ಮಾನುಷಿ ತಮ್ಮದಾಗಿಸಿಕೊಂಡಿದ್ದಾರೆ.

ಸ್ಪರ್ಧೆಯ ಪ್ರಶ್ನೋತ್ತರ ಸುತ್ತಿನಲ್ಲಿ ಯಾವ ವೃತ್ತಿಗೆ ಹೆಚ್ಚಿನ ಸಂಬಳಕ್ಕೆ ಅರ್ಹ ಮತ್ತು ಯಾಕೆ ಎಂಬ ಪ್ರಶ್ನೆಯನ್ನು ಮಾನುಷಿಯವರಲ್ಲಿ ಕೇಳಲಾಗಿತ್ತು.
ಸಂಬಳದ ಪ್ರಶ್ನೆ ಅಲ್ಲ ಆದರೆ ಅತೀ ಹೆಚ್ಚು ಗೌರವ ಗಳಿಸುವವಳು ಅಮ್ಮ ಎಂದು ಮಾನುಷಿ ಉತ್ತರಿಸಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.