ADVERTISEMENT

ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ರಾಜ್ ಚೆಟ್ಟಿಗೆ `ಬೇಬಿ ನೊಬೆಲ್'

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 19:59 IST
Last Updated 16 ಏಪ್ರಿಲ್ 2013, 19:59 IST
ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ರಾಜ್ ಚೆಟ್ಟಿಗೆ  `ಬೇಬಿ ನೊಬೆಲ್'
ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ರಾಜ್ ಚೆಟ್ಟಿಗೆ `ಬೇಬಿ ನೊಬೆಲ್'   

ವಾಷಿಂಗ್ಟನ್ (ಪಿಟಿಐ): ಅರ್ಥಶಾಸ್ತ್ರದ `ಬೇಬಿ ನೊಬೆಲ್' ಎಂದೇ ಬಣ್ಣಿಸಲಾಗಿರುವ ಅಮೆರಿಕದ ಪ್ರತಿಷ್ಠಿತ `ಜಾನ್ ಬೇಟ್ಸ್ ಕ್ಲಾರ್ಕ್ ಮೆಡಲ್' ಪುರಸ್ಕಾರಕ್ಕೆ ಭಾರತೀಯ ಮೂಲದ ಯುವ ಅರ್ಥಶಾಸ್ತ್ರಜ್ಞರೊಬ್ಬರು ಪಾತ್ರರಾಗಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ 2009ರಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ದೆಹಲಿ ಮೂಲದ ರಾಜ್ ಚೆಟ್ಟಿ (33), 2013ನೇ ವರ್ಷದ `ಜಾನ್ ಬೇಟ್ಸ್ ಕ್ಲಾರ್ಕ್ ಮೆಡಲ್' ಪುರಸ್ಕಾರಕ್ಕೆ ಭಾಜನರಾದವರು. ತೆರಿಗೆ ನೀತಿ, ಸಾಮಾಜಿಕ ವಿಮೆ ಹಾಗೂ ಶಿಕ್ಷಣ ನೀತಿ ಕುರಿತು ಕೆಲಸ ಮಾಡುತ್ತಿರುವ ರಾಜ್ ಅವರು, ಅಮೆರಿಕದ ಪ್ರಭಾವಿ ಯುವ ಅರ್ಥಶಾಸ್ತ್ರರಾಗಿದ್ದಾರೆ. ಅತ್ಯಂತ ಪ್ರತಿಷ್ಠಿತವಾದ ಈ ಪದಕವನ್ನು ತಮ್ಮದಾಗಿಸಿಕೊಂಡ ಮೊದಲ ಭಾರತೀಯ ಮೂಲದ ಅಮೆರಿಕ ಪ್ರಜೆ ಎಂಬ ಹಿರಿಮೆಗೂ ರಾಜ್ ಅವರು ಪಾತ್ರರಾಗಿದ್ದಾರೆ.

`ಅರ್ಥಶಾಸ್ತ್ರ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿರುವ ರಾಜ್ ಅವರ ಚಿಂತನೆಗಳು, ಪ್ರಮುಖ ಸಾರ್ವಜನಿಕ ನೀತಿಗಳ ಮೇಲೆ ಹೊಸ ಬೆಳಕು ಚೆಲ್ಲಿವೆ' ಎಂದು `ಜಾನ್ ಬೇಟ್ಸ್ ಕ್ಲಾರ್ಕ್ ಮೆಡಲ್' ಪ್ರಶಸ್ತಿ ಸಮಿತಿ ರಾಜ್ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದೆ.

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು, ಕಳೆದ ವರ್ಷ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರಾಜ್ ಅವರು ಅರ್ಥಶಾಸ್ತ್ರಕ್ಕೆ ನೀಡಿರುವ ಅಪೂರ್ವ ಕೊಡುಗೆಯ ಕುರಿತು ಉಲ್ಲೇಖಿಸಿದ್ದರು ಎಂಬುದು ರಾಜ್ ಅವರ ಪಾಂಡಿತ್ಯಕ್ಕೆ ಹಿಡಿದ ಕನ್ನಡಿಯಾಗಿದೆ. `ಆರ್ಥಿಕ ಚಿಂತನೆ ಮತ್ತು ಜ್ಞಾನ'ಕ್ಕೆ ಸಂಬಂಧಿಸಿದಂತೆ ಅರ್ಥಶಾಸ್ತ್ರ ಕ್ಷೇತ್ರಕ್ಕೆ ಮಹತ್ವವಾದ ಕೊಡುಗೆ ನೀಡುವ 40 ವರ್ಷದೊಳಗಿನ ಅಮೆರಿಕದ ಯುವ ಅರ್ಥಶಾಸ್ತ್ರಜ್ಞರಿಗೆ ಪ್ರತಿವರ್ಷ ಈ ಪದಕವನ್ನು ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.