ವಾಷಿಂಗ್ಟನ್ (ಪಿಟಿಐ): ಭೂಮಿಯ ಚಿತ್ರಗಳನ್ನು ತೆಗೆಯುವಂತಹ ಮೂರು ಸ್ಮಾರ್ಟ್ ಫೋನ್ ಗಳನ್ನು ನಾಸಾ ಗಗನಕ್ಕೆ ಹಾರಿ ಬಿಟ್ಟಿದೆ. ಈ ಸ್ಮಾರ್ಟ್ ಫೋನ್ ಗಳು ಬಾಹ್ಯಾಕಾಶಕ್ಕೆ ಉಡಾಯಿಸಲಾದ ಅತ್ಯಂತ ಕಡಿಮೆ ವೆಚ್ಚದ ಉಪಗ್ರಹಗಳಾಗುವ ಸಾಧ್ಯತೆಗಳಿವೆ.
4 ಅಂಗುಲ ಅಳತೆಯ ಚಚ್ಚೌಕದ ಘನಾಕೃತಿ ಪೆಟ್ಟಿಗೆಯೊಂದರಲ್ಲಿ ಈ ಸ್ಮಾರ್ಟ್ ಫೋನ್ ಗಳನ್ನು ಇರಿಸಲಾಗಿದೆ. ಈ ಸ್ಮಾರ್ಟ್ ಫೋನ್ ಕಂಪ್ಯೂಟರ್ ನೊಳಗೆ ಕೂರಿಸಲಾದ ಉಪಗ್ರಹ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದರ ಸಂವೇದಕಗಳು (ಸೆನ್ಸರ್ ಗಳು) ಭೂಮಿ ಮೇಲಿನ ಸೂಕ್ಷ್ಮಗ್ರಾಹಿಗಳಾಗಿ ಇದರೊಳಗಿನ ಕ್ಯಾಮರಾದಲ್ಲಿ ಕೆಲಸ ಮಾಡುತ್ತವೆ.
ವರ್ಜೀನಿಯಾದ ನಾಸಾದ ವಾಲ್ಲೋಪ್ಸ್ ಉಡ್ಡಯನ ಕೇಂದ್ರದಿಂದ ಆರ್ಬಿಟಲ್ ಸೈನ್ಸ್ ಕಾರ್ಪೊರೇಷನ್ ನ ಅಂಟಾರೆಸ್ ರಾಕೆಟ್ ಮೂಲಕ ಈ 'ಅತಿ ಕಡಿಮೆ ವೆಚ್ಚದ ಸ್ಮಾರ್ಟ್ ಫೋನ್ ಗಳ' ಚೊಚ್ಚಲಯ ಹಾರಾಟ ಬಾನುವಾರ ನಡೆಯಿತು.
ಈ ತ್ರಿವಳಿ 'ಫೋನ್ ಸ್ಯಾಟ್'ಗಳು ಕಕ್ಷೆಯಲ್ಲಿ ಕಾರ್ಯಾರಂಭ ಮಾಡಿದ್ದು, ಬಾಹ್ಯಾಕಾಶಕ್ಕೆ ಹಾರಿ ಬಿಡಲಾದ ಅತ್ಯಂತ ಕಡಿಮೆ ವೆಚ್ಚದ ಉಪಗ್ರಹಗಳೆಂದು ಸಾಬೀತು ಮಾಡುವ ಲಕ್ಷಣಗಳನ್ನು ಈಗಾಗಲೇ ತೋರಿಸಿವೆ. ಈ ಫೋನ್ ಸ್ಯಾಟ್ ಗಳಿಂದ ರವಾನಿಸಲಾದ ಸಂದೇಶಗಳನ್ನು ಭೂಮಿಯಲ್ಲಿನ ಹಲವಾರು ಭೂಕೇಂದ್ರಗಳು ಸ್ವೀಕರಿಸಿದ್ದು, ಅವು ಅತ್ಯಂತ ಮಾಮೂಲಿಯಾಗಿ ಕಾರ್ಯ ನಿರ್ವಹಿಸುತ್ತಿವೆ.
ಅತ್ಯಂತ ಕಡಿಮೆ ವೆಚ್ಚದ ಉಪಗ್ರಹಗಳಾಗಿ ಗ್ರಾಹಕ ದರ್ಜೆಯ ಸ್ಮಾರ್ಟ್ ಫೋನ್ ಗಳನ್ನು ಬಾಹ್ಯಾಕಾಶ ಯಾನಗಳಲ್ಲಿ ಬಳಸಬಹುದೇ ಎಂಬುದನ್ನು ಅಧ್ಯಯನ ಮಾಡುವುದು ನಾಸಾದ ಈ 'ಫೋನ್ ಸ್ಯಾಟ್' ಯೋಜನೆಯ ಉದ್ದೇಶ.
ಕ್ಯಾಲಿಫೋರ್ನಿಯಾದ ಮೊಫೆಟ್ ಫೀಲ್ಡ್ ನಲ್ಲಿ ಇರುವ ಆಮೆಸ್ ಸಂಶೋಧನಾ ಕೇಂದ್ರದಲ್ಲಿರುವ ಫೋನ್ ಸ್ಯಾಟ್ ತಂಡವು ಮುಂಬರುವ ದಿನಗಳಲ್ಲಿ ಉಪಗ್ರಹಗಳ ಮೇಲೆ ಗಮನ ಇಡಲಿವೆ. ಈ ಉಪಗ್ರಹಗಳು ಎರಡು ವಾರಗಳಷ್ಟು ಕಾಲ ಕಕ್ಷೆಯಲ್ಲಿ ಉಳಿಯುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.