ADVERTISEMENT

ಮಂಗಳನಲ್ಲಿ ಅಂಗನೆ ಇಲ್ಲ: ನಾಸಾ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2015, 19:40 IST
Last Updated 12 ಆಗಸ್ಟ್ 2015, 19:40 IST

ನ್ಯೂಯಾರ್ಕ್ (ಐಎಎನ್‌ಎಸ್): ನಾಸಾದ ಮಂಗಳ ಗ್ರಹ ಶೋಧ ನೌಕೆ ಕ್ಯೂರಿಯಾಸಿಟಿ ರೋವರ್‌ ಹಲವು ಚಿತ್ರಗಳನ್ನು ಭೂಮಿಗೆ ಕಳುಹಿಸಿದೆ. ಅವುಗಳಲ್ಲಿ ಹಲವು ಅಂತರ್ಜಾಲದಲ್ಲಿ ಲಭ್ಯವೂ ಇವೆ. ಇಂತಹ ಒಂದು ಚಿತ್ರದಲ್ಲಿ ಮಹಿಳೆಯಂತಹ ಆಕೃತಿಯೊಂದನ್ನು ಗುರುತಿಸಿರುವ ಹಲವು ಜನರು ನಾಸಾದ ಕಚೇರಿಗೆ ಪತ್ರ ಬರೆದು ಈ ಬಗ್ಗೆ ಹೆಚ್ಚಿನ ಮಾಹಿತಿ ಕೇಳುತ್ತಿದ್ದಾರೆ.

ಮಹಿಳೆಯಂತಹ ಆಕೃತಿ ಇರುವ ಮಂಗಳ ಗ್ರಹದ ಚಿತ್ರವು, ಹಾರುವ ತಟ್ಟೆ ಮತ್ತು ಅನ್ಯಗ್ರಹ ಜೀವಿ ಆಸಕ್ತರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವರು ಮಂಗಳನ ಮೇಲ್ಮೈನ ಬಂಡೆಗಳ ಮೇಲೆ ನಿಂತಿರುವುದು ಮಾನವನಂತಹ ಆಕೃತಿಯೇ ಸರಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಆದರೆ ನಾಸಾದ ಮಂಗಳ ಅನ್ವೇಷಣಾ ಯೋಜನೆಯ ವಕ್ತಾರ ಗಯ್ ವೆಬ್‌ಸ್ಟರ್, ಚಿತ್ರದಲ್ಲಿರುವ ಆಕೃತಿ ಮಾನವನದ್ದು ಎಂಬುದನ್ನು ನಿರಾಕರಿಸುತ್ತಾರೆ. ಕ್ಯೂರಿಯಾಸಿಟಿ ರೋವರ್‌ ಮಂಗಳನಲ್ಲಿ ಮಹಿಳೆಯನ್ನು ಪತ್ತೆ ಮಾಡಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ವೆಬ್‌ಸ್ಟರ್‌ ಹೇಳಿದ್ದಾರೆ.

ಮಂಗಳನಿಂದ ಬಂದಿರುವ ಅಸಂಖ್ಯ ಚಿತ್ರಗಳಲ್ಲಿ ಜನರು ಮನುಷ್ಯನನ್ನು ಗುರುತಿಸಿದ್ದೇವೆ ಎಂದು ಹೇಳಿ ಪತ್ರ ಬರೆಯುತ್ತಿದ್ದಾರೆ ಎಂದು ಅವರು ಅತೃಪ್ತಿಯನ್ನೂ ವ್ಯಕ್ತಪಡಿಸಿದ್ದಾರೆ.‘ಕಲ್ಲಿನ ರಚನೆಯಲ್ಲಿ ವಿವಿಧ ಆಕೃತಿಗಳನ್ನು ಗುರುತಿಸುವುದು ಬಹಳ ಸುಲಭ’ ಎಂದು ವೆಬ್‌ಸ್ಟರ್‌ ವ್ಯಂಗ್ಯವಾಡಿದ್ದಾರೆ. ಆದರೆ ಅವರು ಚಿತ್ರದಲ್ಲಿ ಕಾಣುವ ಮಹಿಳೆಯಂತಹ ಆಕೃತಿ ಏನು ಎಂಬುದನ್ನು ವಿಶ್ಲೇಷಿಸುವಂತೆ ನಾಸಾದ ವಿಜ್ಞಾನಿಗಳನ್ನು ಕೋರಿದ್ದಾರೆ.

ಕಲ್ಲಿನ ಹರಳಿನ ಗಾತ್ರದ ಮಾನವ: ಮಹಿಳೆಯಂತಹ ಆಕೃತಿ ಇರುವ ಚಿತ್ರವನ್ನು ತೆಗೆದ ದಿನವೇ ನಾಸಾದ ಕ್ಯೂರಿಯಾಸಿಟಿ ರೋವರ್ ಮತ್ತೊಂದು ಚಿತ್ರವನ್ನೂ ಸೆರೆಹಿಡಿದಿದೆ. ಅದರಲ್ಲಿ ಮಾನವನಂತಹ ಆಕೃತಿ, ರೋವರ್‌ನ ಒಂದು ಚಕ್ರವೂ ಸೆರೆಯಾಗಿದೆ.

ರೋವರ್‌ನ ಚಕ್ರವನ್ನು ಆ ಆಕೃತಿಯೊಂದಿಗೆ ಹೋಲಿಸಿದಾಗ ಆಕೃತಿ ಕಲ್ಲಿನ ಸಣ್ಣ ಹರಳಿನ ಗಾತ್ರದ್ದು ಎಂದು ತಿಳಿದು ಬಂದಿದೆ. ಮಂಗಳನಲ್ಲಿ ಮಾನವ ರೂಪದ  ಜೀವಿ ಇರುವುದೇ ಆಗಿದ್ದಲ್ಲಿ, ಅದು ಸಣ್ಣ ಹರಳಿನ ಗಾತ್ರದ ಜೀವಿ ಆಗಿರುವುದಕ್ಕೆ ಮಾತ್ರ ಸಾಧ್ಯ ಎಂದು ಗಯ್ ವೆಬ್‌ಸ್ಟರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.