ADVERTISEMENT

ಮಸೂದ್‌ ಪರ ವಿಟೊ: ಚೀನಾ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2016, 19:42 IST
Last Updated 19 ಏಪ್ರಿಲ್ 2016, 19:42 IST

ಬೀಜಿಂಗ್‌ (ಪಿಟಿಐ): ಪಠಾಣ್‌ಕೋಟ್‌ ವಾಯುನೆಲೆ ಮೇಲೆ ನಡೆದ ದಾಳಿಯ ಸಂಚುಕೋರ ಜೈಷ್ ಎ ಮೊಹಮ್ಮದ್‌ ಸಂಘಟನೆ ಮುಖ್ಯಸ್ಥ  ಮಸೂದ್‌ ಅಜರ್‌  ಹೆಸರನ್ನು ವಿಶ್ವಸಂಸ್ಥೆಯ ನಿರ್ಬಂಧ ಪಟ್ಟಿಯಲ್ಲಿ ಸೇರಿಸಬೇಕು ಎನ್ನುವ ಭಾರತದ ಪ್ರಯತ್ನಕ್ಕೆ ತಡೆ ಹಾಕಿರುವ ಕ್ರಮವನ್ನು ಚೀನಾ ಮಂಗಳವಾರ  ಸಮರ್ಥಿಸಿಕೊಂಡಿದೆ.

ಗಡಿ ವಿಷಯದ ಕುರಿತು ಚರ್ಚೆ ನಡೆಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಬುಧವಾರ ಚೀನಾಕ್ಕೆ ಭೇಟಿ ನೀಡಲಿದ್ದಾರೆ.  ಮಸೂದ್‌ ಕುರಿತ ತನ್ನ ನಿಲುವಿಗೆ ಬದ್ಧವಿರುವುದಾಗಿ ಹೇಳಿರುವ ಚೀನಾ, ಆತನನ್ನು ವಿಶ್ವಸಂಸ್ಥೆಯ ನಿರ್ಬಂಧ ಪಟ್ಟಿಯಲ್ಲಿ ಸೇರಿಸ­ಬೇಕು ಎನ್ನುವ ಭಾರತದ ಪ್ರಯತ್ನಕ್ಕೆ ತಡೆ ಹಾಕಿರುವ ಕ್ರಮ ವಿಶ್ವಸಂಸ್ಥೆಯ ನಿರ್ಣಯಗಳಿಗೆ ಮತ್ತು ಸಾಕ್ಷ್ಯಧಾರಗಳಿಗೆ ಅನುಗುಣವಾಗಿದೆ ಎಂದು ಚೀನಾ ಈಗಾಗಲೇ ಹೇಳಿದೆ.
 

ದೋವಲ್‌ ಅವರು ಚೀನಾ ಭದ್ರತಾ ಸಲಹೆಗಾರ ಯಾಂಗ್‌ ಜಿಯೆಚಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಚೀನಾಕ್ಕೆ ಭೇಟಿ ನೀಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಅವರು ಮಸೂದ್‌ ವಿಷಯದ ಬಗ್ಗೆ  ಆ ದೇಶದ  ವಿದೇಶಾಂಗ ವ್ಯವಹಾರಗಳ ಸಚಿವರು ಮತ್ತು ರಕ್ಷಣಾ ಸಚಿವರೊಂದಿಗೆ ಚರ್ಚೆ ನಡೆಸಿ, ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿದ್ದರು.

ಮಹತ್ವ ನೀಡದ ಮಾಧ್ಯಮಗಳು: ಚೀನಾ–ಭಾರತದ ನಡುವಣ ದ್ವಿಪಕ್ಷೀಯ ಸಂಬಂಧದ ಮೇಲೆ ಮೂರನೇಯವರಿಂದ ಯಾವುದೇ ತೊಂದರೆ ಆಗದು ಎಂದು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಹೇಳಿರುವುದಕ್ಕೆ ಚೀನಾ ಮಾಧ್ಯಮಗಳು ಮಂಗಳವಾರ ಹೆಚ್ಚು ಮಹತ್ವ ನೀಡಿವೆ.

ಆದರೆ,  ಪಠಾಣ್‌ಕೋಟ್‌ ವಾಯುನೆಲೆ ಮೇಲೆ ನಡೆದ ದಾಳಿಯ ಸಂಚುಕೋರ ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಮುಖ್ಯಸ್ಥ  ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯ ನಿರ್ಬಂಧ ಪಟ್ಟಿಯಲ್ಲಿ ಸೇರಿಸಬೇಕು ಎನ್ನುವ ವಿಷಯದ ಕುರಿತು ನಡೆದ ಚರ್ಚೆಯ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT