ಜಿನಿವಾ (ಎಎಫ್‌ಪಿ): ಇರಾಕ್‌ನಲ್ಲಿ ಇರುವ 11ರಿಂದ 46 ವಯಸ್ಸಿನೊಳಗಿನ ಎಲ್ಲ ಮಹಿಳೆಯರು ಕಡ್ಡಾಯವಾಗಿ ‘ಜನನಾಂಗ ಛೇದನ’ ಮಾಡಿಸಿಕೊಳ್ಳಬೇಕು ಎಂದು ಜಿಹಾದಿಗಳು ಫತ್ವಾ ಹೊರಡಿಸಿರುವ ಅಂಶ ಬೆಳಕಿಗೆ ಬಂದಿದೆ.
ಇರಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ ಹಿರಿಯ ಅಧಿಕಾರಿ ಜಾಕ್ವೇಲಿನ್ ಬ್ಯಾಡ್‌ಕಾಕ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
‘ಇರಾಕ್ ಹಾಗೂ ಸಿರಿಯಾದಲ್ಲಿ ಮುಸ್ಲಿಂ ಪ್ರಾಬಲ್ಯ ಇರುವ ಕೆಲ ಪ್ರದೇಶಗಳನ್ನು ಒಗ್ಗೂಡಿಸಿ, ಪ್ರತ್ಯೇಕ ಇಸ್ಲಾಂ ರಾಷ್ಟ್ರವನ್ನು ಇತ್ತೀಚೆಗೆ ಘೋಷಿಸಿಕೊಂಡಿರುವ ‘ಐಎಸ್‌ಐಎಸ್’ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ) ಈ ಫತ್ವಾ ಹೊರಡಿಸಿದೆ’ ಎಂದು ಜ್ವಾಕ್ವೇಲಿನ್ ತಿಳಿಸಿದ್ದಾರೆ.
‘ಲೈಂಗಿಕ ಆಸಕ್ತಿ ಕುಂದಿಸುವ ಉದ್ದೇಶದಿಂದ ಹೊರಡಿಸಲಾಗಿರುವ ‘ಜನನಾಂಗ ಛೇದನ’ ಫತ್ವಾ ಆದೇಶ ಒಂದು ವೇಳೆ ಜಾರಿಗೆ ಬಂದರೆ, ಇರಾಕ್‌ನ 40 ಲಕ್ಷ ಯುವತಿಯರು ಮತ್ತು ಮಹಿಳೆಯರು ತೊಂದರೆಗೆ ಒಳಗಾಗಲಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ಸಂಪ್ರದಾಯದ ಹೆಸರಿನಲ್ಲಿ ನಡೆ-ಯುವ ಈ ಅಮಾನವೀಯ ಪದ್ಧತಿ, ಇರಾಕ್‌ನ ಕೆಲ ಭಾಗಗಳಲ್ಲಿ ಮಾತ್ರ ಆಚರಣೆಯಲ್ಲಿದೆ. ಅದರಲ್ಲೂ ಮುಖ್ಯವಾಗಿ ‘ಐಎಸ್‌ಐಎಸ್’ ತನ್ನ ರಾಜಧಾನಿಯಾಗಿ ಘೋಷಿಸಿಕೊಂಡಿರುವ ಮೊಸುಲ್ ನಗರದಲ್ಲಿ ಈ ಪದ್ಧತಿ ಜಾರಿಯಲ್ಲಿದೆ’ ಎಂದು ಜಾಕ್ವೇಲಿನ್ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.