ಲಂಡನ್(ಪಿಟಿಐ): ಮಾವಿನ ನಂತರ ಐರೋಪ್ಯ ರಾಷ್ಟ್ರಗಳ ಒಕ್ಕೂಟ ಈಗ ಭಾರತದ ವೀಳ್ಯದೆಲೆ ಆಮದಿಗೆ ನಿಷೇಧ ಹೇರುವ ಸಾಧ್ಯತೆ ಇದೆ.
ಭಾರತದಿಂದ ಆಮದಾಗುತ್ತಿರುವ ವೀಳ್ಯದೆಲೆಯಲ್ಲಿ ದೋಷವಿದೆ ಎಂದು ಸತತವಾಗಿ ವರದಿಯಾಗುತ್ತಿರುವುದಾಗಿ ಒಕ್ಕೂಟದ ಖಾದ್ಯ ಮತ್ತು ಪಶು ಆಹಾರ ತುರ್ತು ಸಚೇತ ವ್ಯವಸ್ಥೆ (ಆರ್‌ಎಎಸ್‌ಎಫ್‌ಎಫ್) ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ವೀಳ್ಯದೆಲೆಯಲ್ಲಿ ‘ಸಾಲ್ಮೊನೆಲ್ಲ’ ಎಂಬ ಬ್ಯಾಕ್ಟಿರಿಯಾಗಳಿರುವುದು ಈ ಆತಂಕಕ್ಕೆ ಕಾರಣ ಎನ್ನಲಾಗಿದೆ. ‘ಸಾಲ್ಮೊನೆಲ್ಲ’ದ ವಿಷದಿಂದ ಮನುಷ್ಯರಲ್ಲಿ ಅತಿಸಾರ ಮತ್ತು ವಾಂತಿ ಉಂಟಾಗುತ್ತದೆ.
ಒಕ್ಕೂಟ ಈಗಾಗಲೆ ಬಾಂಗ್ಲಾದೇಶದಿಂದ ಆಮದಾಗುತ್ತಿದ್ದ ವೀಳ್ಯದೆಲೆ ಮೇಲೆ ನಿಷೇಧ ಹೇರಿದ್ದು ಅದು 2014ರ ಜುಲೈ ಅಂತ್ಯದ ವರೆಗೆ ಜಾರಿಯಲ್ಲಿರುವ ಸಾಧ್ಯತೆ ಇದೆ. ಮರು ತಪಾಸಣೆ ಮಾಡಿದಾಗ ಭಾರತ ಮತ್ತು ಥಾಯ್ಲೆಂಡ್‌ನಿಂದ ಆಮದಾಗುತ್ತಿರುವ ವೀಳ್ಯದೆಲೆಯಲ್ಲಿ ‘ಸಾಲ್ಮೊನೆಲ್ಲ’ ಇರುವುದನ್ನು ಇಂಗ್ಲೆಂಡಿನ ಆಹಾರ ಇಲಾಖೆ ಖಚಿತಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.