ವಾಷಿಂಗ್ಟನ್ (ಪಿಟಿಐ): ಪ್ಯಾರಿಸ್ ಮೇಲೆ ಭಯೋತ್ಪಾದಕರು ನಡೆಸಿದ ಭೀಕರ ದಾಳಿ ಮುಂಬೈ ಮೇಲೆ 2008ರ ನವೆಂಬರ್ 11ರಂದು ನಡೆದ ದಾಳಿಯಂತೆಯೇ ಇದೆ ಎಂದು ಇಲ್ಲಿನ ಭದ್ರತಾ ವಿಶ್ಲೇಷಕರು ಹೇಳಿದ್ದಾರೆ.
ಭಯೋತ್ಪಾದಕ ಕೃತ್ಯಗಳು ಜನರಲ್ಲಿ ಸೃಷ್ಟಿಸಿರುವ ಆತಂಕವನ್ನು ಪಾಶ್ಚಿಮಾತ್ಯ ಜಗತ್ತು ಇನ್ನು ಬೇರೆಯದೇ ರೀತಿಯಲ್ಲಿ ನೋಡಲಿದೆ. ಪ್ಯಾರಿಸ್ ಮೇಲಿನ ದಾಳಿ ಅಂಥದ್ದೊಂದು ಸಂದರ್ಭ ಸೃಷ್ಟಿಸಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಫ್ರಾನ್ಸ್ ದೇಶದ ರಾಜಧಾನಿಯ ವಿವಿಧ ಸ್ಥಳಗಳ ಮೇಲೆ, ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ಕ್ರೀಡಾಂಗಣದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 120ಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ.
‘ಪ್ಯಾರಿಸ್ ಮೇಲಿನ ದಾಳಿಯು ಕಡಿಮೆ ಖರ್ಚಿನಲ್ಲಿ, ಕಡಿಮೆ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದರಲ್ಲಿ ಮತ್ತು ಇತರ ಕೆಲವು ಆಯಾಮಗಳಲ್ಲಿ ಮುಂಬೈ ಮೇಲೆ 2008ರ ನವೆಂಬರ್ 26ರಂದು ನಡೆದ ದಾಳಿಯನ್ನು ಹೋಲುತ್ತದೆ’ ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಗುಪ್ತದಳ ಮತ್ತು ಭಯೋತ್ಪಾದನಾ ನಿಗ್ರಹ ದಳದ ಉಪ ಆಯುಕ್ತ ಜಾನ್ ಮಿಲ್ಲರ್ ಸಿಎನ್‌ಎನ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ಮುಂಬೈ ಮಾದರಿ’ಯ ದಾಳಿಯನ್ನು ಯುರೋಪಿನಾದ್ಯಂತ ನಡೆಸಬೇಕು ಎಂದು ಆಲ್‌ಕೈದಾ ನಾಯಕ ಒಸಾಮಾ ಬಿನ್ ಲಾಡೆನ್ ಐದು ವರ್ಷಗಳ ಹಿಂದೆ ನೀಡಿದ್ದ ಕರೆಯನ್ನು ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಭದ್ರತಾ ಕಾರ್ಯಕ್ರಮದ ಮುಖ್ಯಸ್ಥ ಬ್ರೂಸ್ ಹಾಫ್‌ಮ್ಯಾನ್ ರೇಡಿಯೊ ಸಂದರ್ಶನದಲ್ಲಿ ನೆನಪಿಸಿಕೊಂಡರು.
‘ಭಯೋತ್ಪಾದಕರು ಅನುಭವಸ್ಥರಂತೆ ಪ್ಯಾರಿಸ್ ಮೇಲೆ ದಾಳಿ ನಡೆಸಿದ್ದಾರೆ. ಇದು ಮುಂಬೈ ಮೇಲಿನ ದಾಳಿ ನಂತರ ನಡೆದ ಇನ್ಯಾವುದೇ ದಾಳಿಯಲ್ಲಿ ಕಂಡುಬಂದಿರಲಿಲ್ಲ’ ಎಂದು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಕೇಂದ್ರದ ಮಾಜಿ ನಿರ್ದೇಶಕ ಮೈಕೇಲ್ ಲೇಯ್ಟರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.