ADVERTISEMENT

ಮೂವರಿಗೆ ರಸಾಯನಶಾಸ್ತ್ರ ನೊಬೆಲ್‌

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2013, 19:30 IST
Last Updated 9 ಅಕ್ಟೋಬರ್ 2013, 19:30 IST

ಸ್ಟಾಕ್‌ಹೋಮ್‌ (ಎಎಫ್‌ಪಿ): ಸಂಕೀರ್ಣ ರಾಸಾಯನಿಕ ಕ್ರಿಯೆಗಳನ್ನು ತಿಳಿಸುವ ಕಂಪ್ಯೂಟರ್‌ ಆಧಾರಿತ ವ್ಯವಸ್ಥೆ ಅಭಿವೃದ್ಧಿಪಡಿಸಿದ ಮೂವರು ವಿಜ್ಞಾನಿಗಳಿಗೆ ಈ ಬಾರಿಯ ರಸಾಯನಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿ ಲಭಿಸಿದೆ. ಅಮೆರಿಕದ ಮಾರ್ಟಿನ್‌ ಕಾರ್‌ಪ್ಲಸ್‌, ಮೈಕೆಲ್‌ ಲೆವಿಟ್‌ ಮತ್ತು ಎರಿ ವಾರ್ಶೆಲ್‌ ಅವರು ಪ್ರಶಸ್ತಿಯನ್ನು ಹಂಚಿ­ಕೊಂಡಿದ್ದಾರೆ.

83 ವರ್ಷದ ಮಾರ್ಟಿನ್‌ ಮೂಲತಃ ಆಸ್ಟ್ರಿಯಾದವರು. 66ವರ್ಷದ ಲೆವಿಟ್‌ ಮತ್ತು 72 ವರ್ಷದ ವಾರ್ಶೆಲ್‌  ಕ್ರಮವಾಗಿ ಬ್ರಿಟನ್‌ ಮತ್ತು ಇಸ್ರೇಲ್‌ ಮೂಲ­­­ದ­ವರು. ಇವರು ಅಮೆರಿಕದ ವಿವಿಧ ವಿಶ್ವವಿದ್ಯಾಲ­ಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಂಶೋಧನೆಗಳಲ್ಲಿ ತೊಡಗಿದ್ದಾರೆ.

ರೂ.7.78 ಕೋಟಿ  ಬಹುಮಾನ ಮೊತ್ತವನ್ನು ಮೂವರೂ ಸಮನಾಗಿ ಹಂಚಿ­ಕೊಳ್ಳಲಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಈ ಬಾರಿ ಬಹುಮಾನದ ಮೊತ್ತ ಕಡಿತ­­­ಗೊಳಿಸ­­ಲಾಗಿದೆ.

ಈ ಮೂವರು ಅಭಿವೃದ್ಧಿಪಡಿಸಿದ ಭಾರಿ ಸಾಮರ್ಥ್ಯದ ಕಂಪ್ಯೂಟರ್‌ ಆಧಾರಿತ ವ್ಯವಸ್ಥೆ, ಸಂಕೀರ್ಣ ರಾಸಾಯನಿಕ ಕ್ರಿಯೆಗಳನ್ನು ಕ್ಷಣ ಮಾತ್ರದಲ್ಲಿ ತಿಳಿಸಬಲ್ಲದು.

‘ಔಷಧ ಉತ್ಪಾದನಾ ತಂತ್ರಜ್ಞಾನ ಮತ್ತು ರಾಸಾಯನಿಕ ವಸ್ತುಗಳ ಉತ್ಪಾದನಾ ಕ್ಷೇತ್ರದಲ್ಲಿ ಈ ಹೊಸ ಸಾಧನ ಕ್ರಾಂತಿ ಮಾಡಲಿದೆ’ ಎಂದು ನೊಬೆಲ್‌ ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ.

ಇಲ್ಲಿಯವರೆಗೂ ಜಾರಿಯಲ್ಲಿದ್ದ ಸಾಂಪ್ರದಾಯಿಕ ಪದ್ಧತಿ  ಅನೇಕ ಹಂತದ ವ್ಯವಸ್ಥೆ ಹೊಂದಿತ್ತು. ಹೀಗಾಗಿ ಸಂಕೀರ್ಣ ರಾಸಾಯನಿಕ ಕ್ರಿಯೆಗಳನ್ನು ಅರಿಯುವುದು ಸುಲಭದ ಕೆಲಸವಾಗಿರಲಿಲ್ಲ. ಜೊತೆಗೆ ಇದಕ್ಕೆ ದೀರ್ಘ ಸಮಯ ಬೇಕಾಗಿತ್ತು. ಡಿಸೆಂಬರ್‌ 10ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯಲಿ­ರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.