ಓಸ್ಲೊ (ಎಎಫ್‌ಪಿ): ವಿಶ್ವದಾದ್ಯಂತ ರಾಸಾಯನಿಕ ಅಸ್ತ್ರ ಬಳಕೆಗೆ ಲಗಾಮು ಹಾಕಲು ಶ್ರಮಿಸುತ್ತಿರುವ ರಾಸಾಯನಿಕ ಅಸ್ತ್ರಗಳ ನಿರ್ಬಂಧ ಸಂಸ್ಥೆಗೆ (ಒಪಿಸಿಡಬ್ಲು)ಈ ಬಾರಿಯ ಶಾಂತಿ ನೊಬೆಲ್ ದೊರೆತಿದೆ.
ಸಂಘರ್ಷ ಪೀಡಿತ ಸಿರಿಯಾದಲ್ಲಿ ರಾಸಾಯನಿಕ ಅಸ್ತ್ರ ಬಳಕೆಗೆ ಕಡಿವಾಣ ಹಾಕುವ ದಿಸೆಯಲ್ಲಿ ಮಾಡಿದ ಕೆಲಸದಿಂದಾಗಿ ಒಪಿಸಿಡಬ್ಲು ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
‘ವಿಶ್ವದಲ್ಲಿ ರಾಸಾಯನಿಕ ಅಸ್ತ್ರಗಳ ನಿರ್ಮೂಲನಕ್ಕೆ ಅವಿರತವಾಗಿ ಶ್ರಮಿಸಿದ ಸಂಸ್ಥೆಗೆ ಈ ಗೌರವ ಪ್ರಾಪ್ತವಾಗಿದೆ’ ಎಂದು ನಾರ್ವೆಯ ನೊಬೆಲ್‌್ ಆಯ್ಕೆ ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂಸ್ಥೆಗೆ ಶಾಂತಿ ನೊಬೆಲ್ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡುತ್ತಿರುವ 16 ವರ್ಷದ ಬಾಲಕಿ ಮಲಾಲಾ, ಈ ಬಾರಿಯ ಶಾಂತಿ ನೊಬೆಲ್‌್ ಗೆ ಪಾತ್ರರಾಗುತ್ತಾರೆ ಎಂದು ಅನೇಕರು ನಿರೀಕ್ಷೆ ಇಟ್ಟುಕೊಂಡಿದ್ದರು.
1993ರ ಜನವರಿ 13ರಂದು ಮಾಡಿಕೊಂಡ ರಾಸಾಯನಿಕ ಅಸ್ತ್ರ ಒಪ್ಪಂದವನ್ನು ಜಾರಿಗೆ ತರುವ ಉದ್ದೇಶದೊಂದಿಗೆ 1997ರಲ್ಲಿ ಸಂಸ್ಥೆ ಅಸ್ತಿತ್ವಕ್ಕೆ ಬಂತು. 189 ದೇಶಗಳು ಹೇಗ್ ಮೂಲದ ಈ ಸಂಸ್ಥೆಯ ಸದಸ್ಯತ್ವ ಹೊಂದಿವೆ. ಅಸ್ತಿತ್ವಕ್ಕೆ ಬಂದ 16 ವರ್ಷಗಳಲ್ಲಿ ಸುಮಾರು 57 ಸಾವಿರ ಟನ್ ರಾಸಾಯನಿಕ ಅಸ್ತ್ರಗಳನ್ನು ಈ ಸಂಸ್ಥೆ ನಾಶ ಮಾಡಿದೆ ಎನ್ನುವುದು ವಿಶೇಷ.
ಶಾಂತಿ ನೊಬೆಲ್ ಪ್ರಶಸ್ತಿಯು ಸಂಸ್ಥೆಯೊಂದರ ಪಾಲಾಗಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಐರೋಪ್ಯ ಒಕ್ಕೂಟಕ್ಕೆ ಈ ಪ್ರಶಸ್ತಿ ಒಲಿದಿತ್ತು.
ಸಂಸ್ಥೆಯ ಪ್ರತಿಕ್ರಿಯೆ: ‘ಈ ಬಾರಿಯ ಶಾಂತಿ ನೊಬೆಲ್ ಪ್ರಶಸ್ತಿಯು ರಾಸಾಯನಿಕ ಅಸ್ತ್ರವನ್ನು ನಿಷೇಧಿಸುವ ದಿಸೆಯಲ್ಲಿ ರಾಷ್ಟ್ರಗಳಿಗೆ ಪ್ರೇರೇಪಣೆ
ನೀಡಲಿದೆ’ ಎಂದು ಒಪಿಸಿಡಬ್ಲು ಪ್ರತಿಕ್ರಿಯಿಸಿದೆ.
ತವರಲ್ಲಿ ನಿರಾಸೆ
(ಇಸ್ಲಾಮಾಬಾದ್ ವರದಿ): ಮಲಾಲಾಗೆ ಶಾಂತಿ ನೊಬೆಲ್ ಕೈತಪ್ಪಿದ್ದಕ್ಕೆ ಪಾಕಿಸ್ತಾನದಲ್ಲಿ ರಾಜಕೀಯ ವ್ಯಕ್ತಿಗಳಿಂದ ಹಿಡಿದು ಎಲ್ಲರೂ ಬೇಸರ ವ್ಯಕ್ತಪಡಿಸಿದ್ದಾರೆ.
‘ಮಲಾಲಾ ಪಾಕಿಸ್ತಾನದ ಹೆಮ್ಮೆಯ ಪುತ್ರಿ’ ಎಂದು ಪ್ರಧಾನಿ ನವಾಜ್ ಷರೀಫ್ ಬಣ್ಣಿಸಿದ್ದಾರೆ. ‘ನೊಬೆಲ್ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ, ಮಲಾಲಾ ಭವಿಷ್ಯದ ಪ್ರಧಾನಿಯಾಗಲಿ’ ಎಂದು ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಪುತ್ರಿ ಬಖ್ತಾವರ್ ಭುಟ್ಟೊ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.