ADVERTISEMENT

ಶಿರಚ್ಛೇದ ವಿಡಿಯೊ ನೈಜ: ಬೇಹುಗಾರಿಕಾ ದಳ

ಅಮೆರಿಕಕ್ಕೆ ದಿಗಿಲು ಮೂಡಿಸಿದ ಮತ್ತೊಬ್ಬ ಪತ್ರಕರ್ತನ ಹತ್ಯೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2014, 19:30 IST
Last Updated 3 ಸೆಪ್ಟೆಂಬರ್ 2014, 19:30 IST

ವಾಷಿಂಗ್ಟನ್‌ (ಪಿಟಿಐ): ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಮತ್ತು ಸಿರಿಯಾ (ಐಎಸ್‌ಐಎಸ್‌) ಉಗ್ರರು ಅಮೆರಿಕದ ಪತ್ರಕರ್ತ ಸ್ಟೀವನ್‌ ಸಟ್ಲಾಫ್‌ ಅವರ ಶಿರಚ್ಛೇದ ಮಾಡಿರುವ ವಿಡಿಯೊ ತುಣುಕು­ಗಳು ನೈಜ ಎಂದು ಅಮೆರಿಕ ಬುಧವಾರ ಖಚಿತ ಪಡಿಸಿದೆ.

ಸಟ್ಲಾಫ್‌ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಈ ವಿಡಿಯೊ ತುಣುಕುಗಳು ಸಾಮಾಜಿಕ ಜಾಲ ತಾಣದಲ್ಲಿ ಮಂಗಳವಾರ ಬಿತ್ತರ­ಗೊಂಡಿತ್ತು. ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಎರಡು ವಾರಗಳಿಂದೀಚೆಗೆ ಅಮೆರಿಕ ಪತ್ರಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಎರಡನೇ ಪ್ರಕರಣ ಇದಾಗಿದ್ದು, ಇದರಿಂದ ಆ ರಾಷ್ಟ್ರ ದಿಗಿಲುಗೊಂಡಿದೆ.

ಕಳೆದ ತಿಂಗಳು ಅಮೆರಿಕ ಪತ್ರಕರ್ತ ಜೇಮ್ಸ್‌ ಫೋಲೆ ಅವರನ್ನು ಉಗ್ರರು ಅಮಾನುಷವಾಗಿ ಹತ್ಯೆ ಮಾಡಿದ್ದರು. ಈಗ ಸಟ್ಲಾಫ್‌ ಅವರ ಶಿರಚ್ಛೇದ ಮಾಡಿದ ಸ್ಥಳ ಕೂಡ ಫೋಲೆ ಅವರನ್ನು ಹತ್ಯೆ ಮಾಡಿದ ಸ್ಥಳದಂತೆಯೇ ಇದೆ. ಈ ಎರಡೂ ಕೃತ್ಯ ಎಸಗಿದ ವ್ಯಕ್ತಿ ಕೂಡ ಒಬ್ಬನೇ ಆಗಿದ್ದಾನೆ ಎನ್ನಲಾಗಿದೆ.

‘ಸ್ಟೀವನ್‌ ಸಟ್ಲಾಫ್‌ ಅವರ ಶಿರಚ್ಛೇದ ಮಾಡಿ­ರುವ ವಿಡಿಯೊ ತುಣುಕುಗಳನ್ನು ಬೇಹುಗಾರಿಕಾ ದಳಗಳು ವಿಶ್ಲೇಷಿಸಿ, ಇದು ನೈಜವಾದ ದೃಶ್ಯಗಳು ಎಂಬ ಅಭಿಪ್ರಾಯಕ್ಕೆ ಬಂದಿವೆ’ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ­ರಾದ ಕೈಥ್ಲಿನ್‌ ಹೆಡೆನ್‌ ಹೇಳಿದ್ದಾರೆ.
‘ಈ ಘಟನೆ ಬಗ್ಗೆ ಲಭ್ಯವಾಗುವ ಎಲ್ಲಾ ಮಾಹಿತಿಗಳನ್ನು ನಾವು ನೀಡುವೆವು’ ಎಂಬ ಅವರ ಹೇಳಿಕೆಯನ್ನು ಸಿಎನ್‌ಎನ್‌ ವಾಹಿನಿ ವರದಿ ಮಾಡಿದೆ.

ಅಂತರ್ಜಾಲದಲ್ಲಿ ಬಿತ್ತರಗೊಂಡಿರುವ ಒಂದು ವಿಡಿಯೊ ತುಣುಕಿನಲ್ಲಿ ಸಟ್ಲಾಫ್‌ ಅವರು ಕೈದಿಗಳು ತೊಡುವಂತಹ ಕಿತ್ತಳೆ ಬಣ್ಣದ ಉಡುಪು ಧರಿಸಿ, ಮರಳುಗಾಡಿನಲ್ಲಿ ಮಂಡಿಯೂರಿ ಕುಳಿತಿದ್ದಾರೆ. ಮುಖಕ್ಕೆ ಗವಸು ಧರಿಸಿದ ವ್ಯಕ್ತಿಯೊಬ್ಬ ಹರಿತವಾದ ಚಾಕುವಿನಿಂದ ಸಟ್ಲಾಫ್‌ ಅವರ ಶಿರಚ್ಛೇದ ಮಾಡಿದ ದೃಶ್ಯಗಳಿವೆ.

ಐಎಸ್‌ಐಎಸ್‌ ವಿರುದ್ಧ ವೈಮಾನಿಕ ಕಾರ್ಯಾಚರಣೆ ನಡೆಸುವ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರ ನಿರ್ಧಾರದ ವಿರುದ್ಧ ಉಗ್ರರು ಕಿಡಿಕಾರಿದ್ದಾರೆ. ‘ನಾನು ಮತ್ತೆ ಹಿಂದಿರುಗಿದ್ದೇನೆ ಒಬಾಮ... ಇಸ್ಲಾಮಿಕ್‌ ಸ್ಟೇಟ್‌ ಗುಂಪಿನ ವಿರುದ್ಧ ಅಮೆರಿಕ ಸೊಕ್ಕಿನ ನೀತಿ ಅನುಸರಿಸುತ್ತಿದೆ. ನಿಮ್ಮ (ಅಮೆರಿಕ) ಕ್ಷಿಪಣಿಗಳು ನಮ್ಮ ಜನರ ಮೇಲೆ ದಾಳಿ ಮುಂದುವರಿಸಿದಷ್ಟು ಕಾಲವೂ ನಮ್ಮ ಕತ್ತಿ ನಿಮ್ಮ ಜನರ ಕುತ್ತಿಗೆ ಮೇಲೆ ಆಡುತ್ತಿರುತ್ತದೆ’ ಎಂಬ ಮಾತುಗಳು ಎರಡನೇ ವಿಡಿಯೊ ತುಣುಕಿನಲ್ಲಿದೆ.

ವಿಡಿಯೊ ತುಣುಕಿನ ಕಡೆಯಲ್ಲಿ ಒತ್ತೆಯಲ್ಲಿರುವ ಬ್ರಿಟನ್‌ ನಾಗರಿಕರ ಜೀವಕ್ಕೆ ಅಪಾಯ ಇದೆ ಎಂಬ ಬೆದರಿಕೆ ಇದೆ. ಇಂತಹದ್ದೇ ಬೆದರಿಕೆಯನ್ನು ಸಟ್ಲಾಫ್‌ ಅವರಿಗೂ ಉಗ್ರರು ಹಾಕಿದ್ದರು. ಫೋಲೆ ಅವರ ಹತ್ಯೆ ವಿಡಿಯೊದಲ್ಲಿ ಈ ಬೆದರಿಕೆ ಇತ್ತು. ಈ ಮಧ್ಯೆ, ಫೋಲೆ ಅವರನ್ನು ಹತ್ಯೆ ಮಾಡಿದ ವ್ಯಕ್ತಿಯ ಪತ್ತೆ ಕಾರ್ಯದಲ್ಲಿ ಬ್ರಿಟನ್‌ ಪ್ರಗತಿ ಸಾಧಿಸಿದೆ. ಆತನ ಹೆಸರನ್ನು ಬಹಿರಂಗ ಮಾಡಿಲ್ಲ ಅಷ್ಟೆ ಎಂದು ಅಮೆರಿಕದಲ್ಲಿರುವ ಬ್ರಿಟನ್‌ ರಾಯಭಾರಿ ಹೇಳಿದ್ದಾರೆ.

ಇರಾಕ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯ­ವಾದ ಯಾಜಿದಿಗಳ ವಿರುದ್ಧ ಹಾಗೂ ಕುರ್ದಿಶ್‌ ರಾಜಧಾನಿ ಇರ್ಬಿಲ್‌ ಮೇಲೆ ದಾಳಿ ಮಾಡ ತೊಡಗಿದ ಉಗ್ರರನ್ನು ಬಗ್ಗುಬಡಿಯಲು ವೈಮಾನಿಕ ಕಾರ್ಯಾಚರಣೆ ನಡೆಸಲು ಒಬಾಮ ಸೂಚಿಸಿದ್ದರು. ಸಿರಿಯಾದಲ್ಲಿ ಅಶಾಂತಿ ಉಂಟು ಮಾಡಿದ ಐಎಸ್‌ಐಎಸ್‌ ಉಗ್ರರು, ಇರಾಕ್‌ನಲ್ಲಿ ಸುನ್ನಿಗಳ ಪ್ರಾಬಲ್ಯ ಇರುವ ಪ್ರದೇಶಗಳಿಗೆ ನುಗ್ಗಿ ಹಲವು ಸ್ಥಳಗಳನ್ನು ವಶ ಪಡಿಸಿಕೊಂಡಿದ್ದಾರೆ.

‘ಸರ್ವನಾಶ ಮಾಡದೆ ಬಿಡೆವು’
‘ಇದು ಹಿಂಸಾಚಾರದ ಹೇಯ ರೂಪ. ಇಂತಹ­ದ್ದನ್ನು ಅಮೆರಿಕ ಸಹಿಸದು. ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಗುಂಪಿನ ಬಲ ಕುಗ್ಗಿಸಿ, ಅವರನ್ನು ಸರ್ವನಾಶ ಮಾಡಲು ಮೈತ್ರಿಕೂಟ ರಚಿಸುವೆವು’ ಎಂದು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಹೇಳಿದ್ದಾರೆ. ಯೂರೋಪ್‌ ಪ್ರವಾಸದಲ್ಲಿರುವ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇಬ್ಬರು ಪತ್ರಕರ್ತರ ಹತ್ಯೆಯನ್ನು ನಾವು ಮರೆಯುವವರಲ್ಲ. ಉಗ್ರರನ್ನು ಬಗ್ಗುಬಡಿ­ಯು­ವುದಕ್ಕೆ ಸಮಯ ಹಿಡಿಯುತ್ತಿದೆ. ಆದರೂ ಕೊನೆಗೆ ನ್ಯಾಯ ಸಿಗುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.