ವಾಷಿಂಗ್ಟನ್: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಜೊತೆ ಜೂನ್ 12ರಂದು ಸಿಂಗಪುರದಲ್ಲಿ ಶೃಂಗಸಭೆ ನಡೆಯಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಖಚಿತಪಡಿಸಿದ್ದಾರೆ.
ಈ ಮೂಲಕ ಕೊರಿಯಾ ಪರ್ಯಾಯ ದ್ವೀಪದಲ್ಲಿ ಅಣ್ವಸ್ತ್ರ ನಾಶ ಕಾರ್ಯ ಆರಂಭವಾಗಲಿದೆ ಎಂದೂ ಅವರು ಹೇಳಿದ್ದಾರೆ.
ಉತ್ತರ ಕೊರಿಯಾದ ಸೇನಾ ಜನರಲ್ ಕಿಮ್ ಯಾಂಗ್ ಚೊಲ್ ಜೊತೆ ಶ್ವೇತಭವನದಲ್ಲಿ 80 ನಿಮಿಷಗಳ ಕಾಲ ಸಭೆ ನಡೆಸಿದ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಈ ವೇಳೆ ಚೊಲ್ ಅವರು ಕಿಮ್ ಜಾಂಗ್ ಉನ್ ಪತ್ರವನ್ನು ಟ್ರಂಪ್‌ಗೆ ನೀಡಿದ್ದಾರೆ.
‘ಸಭೆ ಚೆನ್ನಾಗಿ ನಡೆಯಿತು. ಸಿಂಗಪುರದಲ್ಲಿ ನಾವು ಭೇಟಿಯಾಗಲಿದ್ದೇವೆ’ ಎಂದು ಚೊಲ್ ತೆರಳಿದ ಬಳಿಕ ಟ್ರಂಪ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೋಂಪಿಯೊ ಜೊತೆ ನ್ಯೂಯಾರ್ಕ್‌ನಲ್ಲಿ ಎರಡು ದಿನಗಳ ಕಾಲ ಮಾತುಕತೆ ನಡೆಸಿದ ಬಳಿಕ ಚೋಲ್ ವಾಷಿಂಗ್ಟನ್‌ಗೆ ಬಂದಿದ್ದರು.
ಕೊರಿಯಾ ಪರ್ಯಾಯ ದ್ವೀಪದಲ್ಲಿ ಅಣ್ವಸ್ತ್ರ ನಾಶ ಕಾರ್ಯ ದೀರ್ಘ ಪ್ರಕ್ರಿಯೆಯಾಗಲಿದೆ ಎಂದಿರುವ ಟ್ರಂಪ್, ‘ಇದೊಂದು ಪ್ರಕ್ರಿಯೆ ಅಷ್ಟೆ ಎಂದು ನಾನು ನಂಬಿರುವೆ. ಆದರೆ ಸಂಬಂಧಗಳು ಸುಧಾರಣೆಯಾಗುತ್ತಿರುವುದು ಧನಾತ್ಮಕ ವಿಷಯ' ಎಂದಿದ್ದಾರೆ.
‘ಉತ್ತರ ಕೊರಿಯಾದವರು ಅಣ್ವಸ್ತ್ರನಾಶಗೊಳಿಸುವ ಕಾರ್ಯವನ್ನು ಮಾಡಲಿದ್ದಾರೆ ಮತ್ತು ದೇಶದ ಅಭಿವೃದ್ಧಿಯನ್ನು ಅವರು ಬಯಸುತ್ತಾರೆ’ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.