ADVERTISEMENT

ಸಲ್ಲೇಖನ ವ್ರತ ಅಕ್ರಮವಲ್ಲ

ರಾಜಸ್ತಾನ ಹೈಕೋರ್ಟ್ ತೀರ್ಪಿಗೆ ತಡೆ ನೀಡಿದ ಸುಪ್ರೀಂಕೋರ್ಟ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2015, 19:30 IST
Last Updated 31 ಆಗಸ್ಟ್ 2015, 19:30 IST

ನವದೆಹಲಿ (ಪಿಟಿಐ): ಸಲ್ಲೇಖನ ವ್ರತ ಅಕ್ರಮ ಎಂದು ಹೇಳಿದ್ದ ರಾಜಸ್ತಾನ ಹೈಕೋರ್ಟ್‌ ತೀರ್ಪಿಗೆ ಸುಪ್ರೀಂಕೋರ್ಟ್‌ ತಡೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎಚ್‌. ಎಲ್‌. ದತ್ತು ಹಾಗೂ ನ್ಯಾ. ಅಮಿತ್ವಾ  ರಾಯ್‌ ಅವರಿದ್ದ ಪೀಠ ಹೈಕೋರ್ಟ್‌ ತೀರ್ಪಿಗೆ ತಡೆ ನೀಡಿದ್ದು, ಈ ಸಂಬಂಧ ಕೇಂದ್ರ ಸರ್ಕಾರ , ರಾಜಸ್ತಾನ ಸರ್ಕಾರ ಹಾಗೂ ಇತರರಿಗೆ ನೋಟಿಸ್‌ ಜಾರಿಗೊಳಿಸಿದೆ.

ಸಲ್ಲೇಖನ ವ್ರತ ಅಕ್ರಮ ಎಂದು ಹೇಳಿದ್ದ ರಾಜಸ್ತಾನ ಹೈಕೋರ್ಟ್‌, ಆಗಸ್ಟ್‌ 10ರಂದು ಈ ಕುರಿತು ತೀರ್ಪು ನೀಡಿ ಐಪಿಸಿಯ 306 ಹಾಗೂ 309ನೇ ಕಲಂ ಅಡಿ ಇದು ಆತ್ಮಹತ್ಯೆಗೆ ಪ್ರಚೋದನೆ ನೀಡುವ ಅಪರಾಧವಾಗಿದೆ ಎಂದು ಹೇಳಿತ್ತು.

ಹೈಕೋರ್ಟ್‌ ಆದೇಶದ ವಿರುದ್ಧ ವಿವಿಧ ಜೈನ ಸಂಘಟನೆಗಳು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ರಾಜಸ್ತಾನದಲ್ಲಿ ಪ್ರತಿಭಟನೆಗಳೂ ನಡೆದಿದ್ದವು.
ಜೈನಧರ್ಮದ ಮೂಲತತ್ವ ಅರ್ಥ ಮಾಡಿಕೊಳ್ಳದೇ ತೀರ್ಪು ನೀಡಲಾಗಿದೆ ಎಂದು ಅರ್ಜಿಗಳಲ್ಲಿ ಹೇಳಲಾಗಿತ್ತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಹರೀಶ್‌ಸಾಳ್ವೆ, ಸುಶೀಲ್‌ ಕುಮಾರ್‌ ಜೈನ್‌ ಹಾಗೂ ಇತರರು ಸಲ್ಲೇಖನ ಅಂದರೆ ಆತ್ಮವನ್ನು ಕರ್ಮಗಳಿಂದ ಹೊರತಾಗಿಸಿ ಪರಿಶುದ್ಧಗೊಳಿಸುವ ಕ್ರಮ. ಅದನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗದು ಎಂದು ವಾದಿಸಿದರು.

ಸಲ್ಲೇಖನ ಮತ್ತು ಆತ್ಮಹತ್ಯೆಯ ಪರಿಕಲ್ಪನೆ ಸಂಪೂರ್ಣವಾಗಿ ಭಿನ್ನವಾಗಿವೆ. ಸಲ್ಲೇಖನವನ್ನು ಸಿಟ್ಟು ಅಥವಾ ಉದ್ವೇಗದ ಭರದಲ್ಲಿ ಕೈಗೊಳ್ಳುವುದಿಲ್ಲ. ಸಲ್ಲೇಖನ ಕೈಗೊಳ್ಳುವವರು ಆಧ್ಯಾತ್ಮಿಕ ಪರಿಶುದ್ಧಿ ಸಾಧಿಸಲು ಪ್ರಜ್ಞಾಪೂರ್ವಕವಾಗಿ ಲೌಕಿಕ ಸಂಗತಿಗಳನ್ನು ಪರಿತ್ಯಜಿಸುತ್ತ ಬರುತ್ತಾರೆ ಎಂದು ವಕೀಲರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.