ADVERTISEMENT

ಸೌದಿ ಚುನಾವಣೆ: ಮೊದಲ ಬಾರಿ ಮಹಿಳೆಯರಿಗೆ ಮತದಾನ ಹಕ್ಕು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2015, 9:30 IST
Last Updated 12 ಡಿಸೆಂಬರ್ 2015, 9:30 IST

ರಿಯಾದ್‌ (ಎಎಫ್‌ಪಿ): ಸೌದಿ ಅರೇಬಿಯಾದಲ್ಲಿ ನಗರಸಭೆ ಚುನಾವಣೆಯ ಮತದಾನ ಶನಿವಾರ ಬೆಳಿಗ್ಗೆ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. 

284 ಸ್ಥಾನಗಳಿಗೆ ನಡೆಯುತ್ತಿರುವ ನಗರಸಭೆ ಚುನಾವಣೆಯಲ್ಲಿ ಒಟ್ಟು 900 ಮಹಿಳೆಯರು ಸ್ಪರ್ಧಿಸಿದ್ದಾರೆ. 6 ಸಾವಿರಕ್ಕೂ ಹೆಚ್ಚು ಪುರಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ, ಜಾಗೃತಿ ಕೊರತೆಯಿಂದಾಗಿ ಮಹಿಳೆಯರು ಮತ ಚಲಾಯಿಸಲು ಮುಂದೆ ಬರುತ್ತಿಲ್ಲ, ಸಾಕಷ್ಟು ಮಹಿಳೆಯರ ಹೆಸರನ್ನು ಅಧಿಕಾರಿಗಳು ಉದ್ದೇಶಪೂರ್ವಕಾಗಿಯೇ ಮತದಾರರ ಪಟ್ಟಿಯಿಂದ ತೆಗೆದು ಹಾಕಿದ್ದಾರೆ. ಮಹಿಳೆಯರು ಮುಕ್ತವಾಗಿ ಮತ ಚಲಾಯಿಸುವುದಕ್ಕೆ ಅಡ್ಡಿ ಮಾಡಲಾಗುತ್ತಿದೆ ಎಂದು ಕಣದಲ್ಲಿರುವ ಮಹಿಳಾ ಅಭ್ಯರ್ಥಿಗಳು ದೂರಿದ್ದಾರೆ.

ಸೌದಿಯಲ್ಲಿ 2005 ಮತ್ತು 2011ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಆದರೆ ಕಳೆದ ಚುನಾವಣೆಗಳಲ್ಲಿ ಪುರುಷರು ಮಾತ್ರ ಸ್ಪರ್ಧಿಸುವ ಹಾಗೂ ಮತದಾನ ಮಾಡುವ ಹಕ್ಕನ್ನು ಹೊಂದಿದ್ದರು. 

ಸೌದಿಯ ಹಿಂದಿನ ರಾಜ ಅಬ್ದುಲ್ಲಾ 2005ರಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಸಿದ್ದರು. 2015ರಲ್ಲಿ ಮಹಿಳೆಯರಿಗೆ ಮತದಾನ, ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡುವುದಾಗಿ ಹೇಳಿದ್ದರು. ಜನವರಿ ತಿಂಗಳಲ್ಲಿ ಅಬ್ದುಲ್ಲಾ ಮೃತಪ ಟ್ಟರು. ನಂತರ ಅಧಿಕಾರಕ್ಕೆ ಬಂದ ಸಲ್ಮಾನ್‌ ಮಹಿಳೆಯರಿಗೆ ಮತದಾನದ ಹಕ್ಕನ್ನು ಜಾರಿಗೆ ತಂದಿದ್ದರು.

2.10 ಕೋಟಿ ಜನಸಂಖ್ಯೆ ಇರುವ  ಸೌದಿ ಅರೇಬಿಯಾದಲ್ಲಿ 13.5 ಲಕ್ಷ ಪುರುಷರು ಮತದಾನಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದರೆ, ಕೇವಲ 1.31 ಲಕ್ಷ ಮಹಿಳೆಯರು ಮತದಾನ ಮಾಡಲು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.