ದೊಹುಕ್ (ಎಎಫ್‌ಪಿ): ಐಎಸ್ಐಎಸ್ ಉಗ್ರರಿಂದ ತಪ್ಪಿಸಿಕೊಂಡು ಸಂತ್ರಸ್ತರಾಗಿರುವ ಇರಾಕ್‌ನ ಯಾಜಿದಿ ಸಮುದಾಯದ ಜನರು ಹಸಿವಿನಿಂದ ಕಂಗೆಟ್ಟಿದ್ದಾರೆ. ಸಿಂಜರ್ ಪರ್ವತಗಳಲ್ಲಿ ಆಶ್ರಯ ಪಡೆದಿದ್ದ ಕೆಲವರು ದೋಹಕ್ ನಗರದ ಹೊರವಲಯದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ರಕ್ಷಣೆ ಪಡೆದಿದ್ದಾರೆ.
‘ನಾವು ನಮ್ಮ ಮನೆಗಳಲ್ಲಿಯೇ ಸಾವಿಗೀಡಾಗಿದ್ದರೆ ಚೆನ್ನಾಗಿತ್ತು’ ಎಂದು ಪತಿಯನ್ನು ಕಳೆದುಕೊಂಡು ತನ್ನ ಮಕ್ಕಳೊಂದಿಗೆ ಆಶ್ರಯ ಪಡೆದಿರುವ 25 ವರ್ಷದ ಹಾಜಿಕಾ ಹೇಳಿದರು.
‘ಉಗ್ರರು ಕೊಲ್ಲುವುದನ್ನು, ಗುಂಡು ಹಾರಿಸುವುದನ್ನು ಮಕ್ಕಳು ಸಹ ಕಣ್ಣಾರೆ ಕಂಡಿದ್ದಾರೆ. ಜೀವ ರಕ್ಷಣೆಗೆ ಗಂಟೆಗಟ್ಟಲೆ ಓಡಿ ಪರ್ವತದ ತುತ್ತ ತುದಿಗೆ ತಲುಪಿದ್ದೆವು. ಊಟವೂ ಇರಲಿಲ್ಲ, ನೀರೂ ಇರಲಿಲ್ಲ. ಈಗ ನಾವು ಇಲ್ಲಿ ಸುರಕ್ಷಿತವಾಗಿದ್ದೇವೆ. ಆದರೆ ನಮ್ಮವರೆಲ್ಲರನ್ನೂ, ಮನೆ, ಹಣ, ಬಟ್ಟೆ ಇತ್ಯಾದಿಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದೇವೆ. ದೇವರ ಕೃಪೆಯಿಂದ ಮಾತ್ರ ನಾವು ಬದುಕಿದ್ದೇವೆ. ಆದರೆ ಇಲ್ಲಿ ನಮಗೆ ಯಾರೂ ಸಹಾಯ ಮಾಡುತ್ತಿಲ್ಲ’ ಎಂದು ಹಾಜಿಕಾ ಕಣ್ಣೀರಿಟ್ಟರು.
ಸ್ಥಳೀಯ ಕುರ್ದಿಶ್ ಜನರು ಆಹಾರ ನೀಡಿದರೂ ಅದು ಸಾಲುತ್ತಿಲ್ಲ ಎಂದು ನಿರಾಶ್ರಿತರು ಹೇಳಿದರು.
ಇರಾಕ್: ಉಗ್ರರ ವಿರುದ್ಧ ಅಮೆರಿಕ ವಾಯುದಾಳಿ
ವಾಷಿಂಗ್ಟನ್ (ಪಿಟಿಐ): ಇರಾಕ್‌ನಲ್ಲಿ ಬೇರುಬಿಟ್ಟಿರುವ ‘ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಲೆವಂಟ್’ (ಐಎಸ್‌ಐಎಲ್) ಉಗ್ರರ ವಿರುದ್ಧ ಅಮೆರಿಕ ಭಾನುವಾರ ವಾಯುದಾಳಿ ನಡೆಸಿದೆ.
‘ಐಎಸ್‌ಐಎಲ್’ ವಿರುದ್ಧ ಹೋರಾಡುತ್ತಿರುವ ಕುರ್ದಿಷ್ ಪಡೆಗೆ ನೆರವು ನೀಡುವ ಸಲುವಾಗಿ, ಅಮೆರಿಕದ ಯುದ್ಧ ವಿಮಾನಗಳು ಇರ್ಬಿಲ್ ಮತ್ತು ಮೊಸುಲ್ ಅಣೆಕಟ್ಟೆ ಸಮೀಪ ಯಶಸ್ವಿಯಾಗಿ ದಾಳಿ ನಡೆಸಿವೆ’ ಎಂದು ಪೆಂಟಗಾನ್ ಮೂಲಗಳು ತಿಳಿಸಿವೆ.
ನಗರಗಳು ವಶಕ್ಕೆ: ಈ ನಡುವೆ ಉಗ್ರರ ಮೇಲೆ ದಾಳಿ ನಡೆಸಿದ ಕುರ್ದಿಶ್ ಪಡೆಗಳು, ಎರಡು ಕ್ರಿಶ್ಚಿಯನ್ ಪಟ್ಟಣಗಳು ಮತ್ತು ಮೋಸುಲ್ ಅಣೆಕಟ್ಟನ್ನು ಪುನಃ ತಮ್ಮ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ರಾಜಧಾನಿ ಬಾಗ್ದಾದ್‌ನಿಂದ 400 ಕಿ.ಮೀ. ದೂರದಲ್ಲಿರುವ ತಲ್ ಅಸ್ಕಫ್ ಮತ್ತು ಬಟ್ನಾಯಹ್ ಪಟ್ಟಣಗಳನ್ನು ಮರಳಿ ಕೈವಶ ಮಾಡಿಕೊಳ್ಳಲಾಗಿದೆ.
31 ಉಗ್ರರ ಹತ್ಯೆ
ಬೈರುತ್ (ಎಪಿ): ಐಎಸ್ಐಎಸ್ನ ಪ್ರಬಲ ನೆಲೆಗಳ ಮೇಲೆ ಹತ್ತೊಂಬತ್ತಕ್ಕೂ ಅಧಿಕ ಸಲ ವಾಯು ದಾಳಿ ನಡೆಸಿದ ಸಿರಿಯಾ ಪಡೆಗಳು ಕನಿಷ್ಠ 31 ಉಗ್ರರನ್ನು ಕೊಂದಿದೆ. ಉಗ್ರರ ನಿಯಂತ್ರಣದಲ್ಲಿರುವ ಉತ್ತರ ಸಿರಿಯಾದ ರಕ್ಕಾ ಪ್ರಾಂತ್ಯದ ಮೇಲೆ ಸಿರಿಯಾ ಪಡೆಗಳು ದಾಳಿ ನಡೆಸಿವೆ. ಘಟನೆಯಲ್ಲಿ 40 ಉಗ್ರರು ಗಾಯಗೊಂಡಿದ್ದಾರೆ ಎಂದು ಮಾನವ ಹಕ್ಕು ಸಂಘಟನೆಯೊಂದು ತಿಳಿಸಿದೆ.
4,400 ನಿರಾಶ್ರಿತರಿಗೆ ಪುನರ್ವಸತಿ: ಆಸ್ಟ್ರೇಲಿಯಾ
ಸಿಡ್ನಿ (ಎಎಫ್‌ಪಿ): ಹಿಂಸಾಚಾರ ಪೀಡಿತ ಇರಾಕ್ ಮತ್ತು ಸಿರಿಯಾ ತೊರೆಯುತ್ತಿರುವ ಸುಮಾರು 4,400 ನಿರಾಶ್ರಿತರಿಗೆ ತನ್ನ ನೆಲದಲ್ಲಿ ಪುನರ್ವಸತಿ ಕಲ್ಪಿಸುವುದಾಗಿ ಆಸ್ಟ್ರೇಲಿಯಾ ಭಾನುವಾರ ಹೇಳಿದೆ.
‘ಆಶ್ರಯ ಕೋರಿ ಆಸ್ಟ್ರೇಲಿಯಾಕ್ಕೆ ಬರುವವರ ದೋಣಿಗಳ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ’ ಎಂದು ವಲಸೆ ಸಚಿವ ಸ್ಕಾಟ್ ಮಾರಿಸನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.