ಸ್ಟಾಕ್‌ಹೋಮ್ (ಎಎಫ್‌ಪಿ): ವಿಶ್ವದ ಸೃಷ್ಟಿಗೆ ಮೂಲ ಕಾರಣ ಎಂದು ನಂಬ ಲಾದ ‘ದೇವ ಕಣ’ಗಳ (ಗಾಡ್್ ಪಾರ್ಟಿ ಕಲ್)ಅಸ್ತಿತ್ವ ಸಾಬೀತು ಪಡಿಸಿದ್ದಕ್ಕಾಗಿ ಬ್ರಿಟನ್ನಿನ ಪೀಟರ್ ಹಿಗ್ಸ್ ಮತ್ತು ಬೆಲ್ಜಿಯಂನ ಫ್ರಾಂಕಾಯ್ಸ್ ಎಂಗ್ಲರ್ಟ್ ಅವರು ಈ ಬಾರಿಯ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಿಗ್ಸ (84) ಮತ್ತು ಎಂಗ್ಲರ್ಟ್ (80) ನೇತೃತ್ವದ ತಂಡವು ಕಳೆದ ವರ್ಷ ‘ದೇವ ಕಣ’ದ ಅಸ್ತಿತ್ವ ಸಾಬೀತು ಮಾಡಿ ಇಡೀ ವಿಶ್ವದಲ್ಲಿ ಸಂಚಲನ ಮೂಡಿಸಿತ್ತು.
ಈ ಇಬ್ಬರು ಭೌತ ವಿಜ್ಞಾನಿಗಳು ₨ 7.2 ಕೋಟಿ (12.5 ಲಕ್ಷ ಡಾಲರ್) ಮೊತ್ತದ ಪ್ರಶಸ್ತಿಯನ್ನು ಹಂಚಿಕೊಳ್ಳಲಿದ್ದಾರೆ. ಡಿ.10ರಂದು ಸ್ಟಾಕ್ ಹೋಮ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಖ್ಯಾತ ವಿಜ್ಞಾನಿ ಆಲ್‌ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತದೆ.
ಐದು ದಶಕಗಳ ಪರಿಶ್ರಮದ ಬಳಿಕ ಹಿಗ್ಸ್ ಮತ್ತು ಎಂಗ್ಲರ್ಟ್ ಅವರು ಸಹ ದ್ಯೋಗಿಗಳ ಜೊತೆ ಸೇರಿ ಕಣ ಸಿದ್ಧಾಂತಕ್ಕೆ ಸಂಬಂಧಿಸಿದ ಮಹತ್ವದ ಸಂಶೋಧನೆ ಮಾಡಿದ್ದರು. ಈ ಸಾಧನೆಗಾಗಿಯೇ ಅವರನ್ನು ಈ ಪ್ರಶಸ್ತಿ ಅರಸಿ ಬಂದಿದೆ.
ದೇವ ಕಣಗಳ ಪತ್ತೆ ಕಾರ್ಯದ ಇತಿಹಾಸ 1964ರಿಂದ ಆರಂಭವಾಗುತ್ತದೆ. ಅಂದು 6 ಜನ ಭೌತ ಶಾಸ್ತ್ರಜ್ಞರು ಮೂರು ತಂಡಗಳಲ್ಲಿ ಈ ನಿಟ್ಟಿನಲ್ಲಿ ಸ್ವತಂತ್ರ ಸಂಶೋಧನೆ ಕೈಗೊಂಡಿದ್ದರು.
‘ಅಗೋಚರವಾದ ಸ್ಥಳದಿಂದ ಜನ್ಮ ತಾಳುವ ಕಣ ವಿಶ್ವದ ಸೃಷ್ಟಿಗೆ ಕಾರಣವಾಗಿದೆ. ಇಡೀ ಬ್ರಹ್ಮಾಂಡ ಶೂನ್ಯವಾಗಿ ಕಂಡರೂ ಅದರೊಳಗೆ ಕಣ ಇದ್ದೇ ಇರುತ್ತದೆ. ಕಣಗಳಿಲ್ಲದೇ ನಮ್ಮ ಅಸ್ತಿತ್ವವೇ ಇಲ್ಲ’ ಎಂದು ನೊಬೆಲ್ ತೀರ್ಪುಗಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ವಿಟ್ಜರ್ಲೆಂಡ್ ನ ಯುರೋಪ್ ಪರ ಮಾಣು ಸಂಶೋಧನಾ ಕೇಂದ್ರ (ಸಿಇಆರ್‌ಎನ್) ‘ದೇವ ಕಣ’ವನ್ನು ಪತ್ತೆ ಹಚ್ಚಿರುವುದಾಗಿ ಹೇಳಿಕೊಂಡಿತ್ತು.
ವಿಜ್ಞಾನಿಗಳಿಗೆ ನೊಬೆಲ್; ಉದ್ಯಾನ ನಗರಿಗೂ ಹೆಮ್ಮೆ...
ಬೆಂಗಳೂರು: ದೇವಕಣಗಳ ಅಸ್ತಿತ್ವ ಸಾಬೀತುಪಡಿಸಿದ ಭೌತ ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಬಂದಿರುವುದು ಈಗ ಉದ್ಯಾನ ನಗರಿಗೂ ಹೆಮ್ಮೆಯ ಸಂಗತಿ.
ಏಕೆಂದರೆ ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಉನ್ನತ ಭೌತವಿಜ್ಙಾನ ಕೇಂದ್ರದ ರೋಹಿಣಿ ಗೋಡ್ಬೊಲೆ ಅವರು ಸುಮಾರು ಒಂದು ದಶಕ ಕಾಲ ಜಿನೀವಾದ ಐರೋಪ್ಯ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ (ಸಿಇಆರ್‌ಎನ್) ಭೌತವಿಜ್ಙಾನಿಯಾಗಿ ಕಾರ್ಯನಿರ್ವಹಿಸಿದ್ದರು.
ದೇವಕಣಗಳ ಅಸ್ತಿತ್ವವನ್ನು ಊಹಿಸಿದ ವಿಜ್ಞಾನಿಗಳ ತಂಡದಲ್ಲಿ ರೋಹಿಣಿ ಕೂಡ ಇದ್ದರು. ಕುತೂಹಲಕರ ಸಂಗತಿಯೆಂದರೆ, ನೊಬೆಲ್ ಪಡೆದಿರುವ ಪೀಟರ್ ಹಿಗ್ಸ್ ಅವರನ್ನು ಆಗ ಇವರು ಭೇಟಿಯಾಗಿದ್ದರು. ರೋಹಿಣಿ ಅವರ ಪಿಎಚ್‌ಡಿ ಸಂಶೋಧನಾ ಸಲಹೆಗಾರರು –ಗುರು ಸಹ ಹಿಗ್ಸ್ ಅವರ ವಿದ್ಯಾರ್ಥಿ.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿರುವ ರೋಹಿಣಿ, ‘ದೇವಕಣಗಳ ಅಸ್ತಿತ್ವ ದೃಢಪಡಿಸಿದ್ದಕ್ಕಾಗಿ 2013ರಲ್ಲಿ ಹಿಗ್ಸ್ ಅವರಿಗೆ ನೊಬೆಲ್ ಬರುವ ಎಲ್ಲ ಸಾಧ್ಯತೆಗಳಿವೆ ಎಂಬುದನ್ನು 2012ರಲ್ಲೇ ನಾವು ಊಹಿಸಿದ್ದೆವು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.