ADVERTISEMENT

‘ಪ್ಲೂಟೊ’ ಊಹೆಗಿಂತ ದೊಡ್ಡದು

​ಪ್ರಜಾವಾಣಿ ವಾರ್ತೆ
Published 14 ಜುಲೈ 2015, 19:53 IST
Last Updated 14 ಜುಲೈ 2015, 19:53 IST

ವಾಷಿಂಗ್ಟನ್‌(ಪಿಟಿಐ): ಸೌರಮಂಡಲದ ಅತ್ಯಂತ ಚಿಕ್ಕ ಹಾಗೂ ಅತಿ ದೂರದ ಗ್ರಹ ‘ಪ್ಲೂಟೊ’ ನಮ್ಮ ಊಹೆಗಿಂತ ದೊಡ್ಡದಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ)  ಹೇಳಿದೆ.

ಭೂಮಿಯಿಂದ ಪುಟ್ಟ ಚುಕ್ಕೆಯಂತೆ ಕಾಣುವ ಪ್ಲೂಟೊ 2,370 ಕಿಲೋ ಮೀಟರ್‌ ಸುತ್ತಳತೆ ಹೊಂದಿದೆ. ಇದು ನಾವು ಹಿಂದೆ ಊಹಿಸಿದ್ದಕ್ಕಿಂತ ಹಲವಾರು ಪಟ್ಟು ಹೆಚ್ಚು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಒಂಬತ್ತು ವರ್ಷಗಳ ನಾಸಾ ಹಾರಿಬಿಟ್ಟ ನ್ಯೂ ಹೊರೈಜನ್ಸ್‌ ಗಗನನೌಕೆ ಮಂಗಳವಾರ ಪ್ಲೂಟೊ ಕಕ್ಷೆಯನ್ನು ತಲುಪಿದ್ದು ಅತೀ ಹತ್ತಿರದಿಂದ ಪುಟ್ಟ ಗ್ರಹದ ಚಿತ್ರಗಳನ್ನು ಸೆರೆ ಹಿಡಿದಿದೆ.

ಅತ್ಯಂತ ದೂರದ ವಸ್ತುಗಳನ್ನು ಕರಾರುವಾಕ್ಕಾಗಿ ಮತ್ತು ಅತ್ಯಂತ ಸ್ಪಷ್ಟವಾಗಿ ಸೆರೆ ಹಿಡಿಯುವ ಸಾಮರ್ಥ್ಯವಿರುವ ಮಸೂರಗಳನ್ನು ಅಳವಡಿಸಿರುವ ಲೋರಿ ಕ್ಯಾಮೆರಾ ಪ್ಲೂಟೊ ವಿವಿಧ ಆಯಾಮಗಳ ಚಿತ್ರಗಳನ್ನು ನಾಸಾಕ್ಕೆ ರವಾನಿಸಿದೆ.

ನೆಪ್ಚೂನ್‌ ಗ್ರಹದಿಂದಾಚೆಗೆ ಇರುವ ಆಕಾಶಕಾಯಗಳಲ್ಲಿ ಪ್ಲೂಟೊ ಅತ್ಯಂತ ದೊಡ್ಡದು ಎಂಬ ವಿಜ್ಞಾನಿಗಳ ಊಹೆಯನ್ನು ನ್ಯೂ ಹೊರೈಜನ್‌ ನೌಕೆ ದೃಢಪಡಿಸಿದೆ. 

1930ರಲ್ಲಿ ಪ್ಲೂಟೊ ಗ್ರಹ ಪತ್ತೆಯಾದ ನಂತರ ಗಾತ್ರದ ನಿಖರತೆ ಕುರಿತು ಚರ್ಚೆಗಳು ನಡೆಯುತ್ತಿದ್ದರೂ ನಿರ್ದಿಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮತ್ತು ಸವಾಲಾಗಿದ್ದ ಪ್ರಶ್ನೆಗೆ ತೆರೆ ಬಿದ್ದಿದೆ ಎಂದು ಪ್ಲೂಟೊ ಯಾನ ಯೋಜನೆ ವಿಜ್ಞಾನಿ ಹಾಗೂ ಸೇಂಟ್‌ ಲೂಯಿಸ್‌ನ ವಾಷಿಂಗ್ಟನ್‌ ವಿ.ವಿ ಪ್ರಾಧ್ಯಾಪಕ ಬಿಲ್ ಮ್ಯಾಕ್‌ ಕಿನಾನ್ ಹೇಳಿದ್ದಾರೆ.

ಪ್ಲೂಟೊ ಗಾತ್ರ ಊಹೆಗಿಂತ ದೊಡ್ಡದಾದರೂ ಅದರ ದ್ರವ್ಯರಾಶಿ ಈ ಹಿಂದೆ ವಿಜ್ಞಾನಿಗಳು ಊಹಿಸಿದ್ದಕ್ಕಿಂತ ಕಡಿಮೆ ಯಾಗಿದ್ದು, ವಾತಾವರಣ  ಮತ್ತು ಮಂಜುಗಡ್ಡೆ ಪ್ರಮಾಣದಲ್ಲೂ ಕೂಡ ವಿಭಿನ್ನತೆ ಕಂಡುಬಂದಿದೆ.

ಪ್ಲೂಟೊದ ಅತಿ ದೊಡ್ಡ ಉಪಗ್ರಹ ಚರಾನ್ ಗಾತ್ರ 1,208 ಕಿ.ಮೀ ಹಾಗೂ ಪುಟ್ಟ ಬಿಂದುವಿನಂತೆ ಗೋಚರಿಸುವ ನಿಕ್ಸ್ ಉಪಗ್ರಹ 35 ಕಿ.ಮೀ ಮತ್ತು ಹೈಡ್ರಾ 45 ಕಿ.ಮೀ ಆಗಿದೆ. ಮಂಜುಗಡ್ಡೆ ಹೆಚ್ಚಿರುವ ಕಾರಣ ಅವು ಹೊಳೆಯುವ ನಕ್ಷತ್ರಗಳಂತೆ ಗೋಚರಿಸುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ನಿಕ್ಸ್‌ ಹಾಗೂ ಹೈಡ್ರಾಗಳಿಗಿಂತ ಇನ್ನೆರೆಡು ಉಪಗ್ರಹಗಳಾದ ಕರ್ಬರಾಸ್‌ ಮತ್ತು ಸ್ಟಿಕ್ಸ್‌ ಚಿಕ್ಕದಾಗಿವೆ. ಭೂಮಿಯಿಂದ ಪ್ಲೂಟೊ ಕಡೆಗೆ 9 ವರ್ಷಗಳ ಹಿಂದೆ ಪಯಣ ಬೆಳೆಸಿದ ನ್ಯೂ ಹಾರೈಜನ್‌ ಗಗನನೌಕೆ ಇದುವರೆಗೂ ಒಟ್ಟು 300 ಕೋಟಿ ಮೈಲುಗಳನ್ನು ಕ್ರಮಿಸಿದೆ. ಪ್ಲೂಟೊ ಕಕ್ಷೆಯನ್ನು ತಲುಪಿರುವ ನೌಕೆ ಪ್ಲೂಟೊ ಸುತ್ತ 12,500 ಕಿ.ಮೀ ದೂರವನ್ನು ಪರಿಭ್ರಮಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT