ಕೈರೊ: 2011ರಲ್ಲಿ ಈಜಿಪ್ಟ್‌ನಲ್ಲಿ ನಡೆದ ದಂಗೆ ಸಂದರ್ಭದಲ್ಲಿ ಲೂಟಿಯಾಗಿದ್ದ ಚಿನ್ನದ ಶವಪೆಟ್ಟಿಗೆಯನ್ನು ನ್ಯೂಯಾರ್ಕ್‌ನಿಂದ ಕೈರೊಗೆ ತರಲಾಗಿದೆ.
ಪಾದ್ರಿ ನೆದ್ಜೆಮಂಖ್ ಅವರ ಶವಪೆಟ್ಟಿಗೆ ಇದಾಗಿದ್ದು, ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಅನಾವರಣಗೊಳಿಸಲಾಗಿದೆ.
1.8 ಮೀಟರ್ ಉದ್ದದ ಈ ಪೆಟ್ಟಿಗೆ ಐತಿಹಾಸಿಕವಾಗಿಯೂ ಮಹತ್ವ ಪಡೆದಿದೆ. ಆದರೆ, ಅಂತರರಾಷ್ಟ್ರೀಯ ಕಳ್ಳಸಾಗಾಣಿಕೆಗಾಗಿ ಇದು ಕುಖ್ಯಾತಿ ಪಡೆದಿತ್ತು.
ಆಕರ್ಷಕ ಕಲಾ ವಿನ್ಯಾಸ ಹೊಂದಿದ್ದ ಚಿನ್ನದ ಶವಪೆಟ್ಟಿಗೆಯನ್ನು 2017ರಿಂದ ಇದುವರೆಗೆ ನ್ಯೂಯಾರ್ಕ್‌ನ ಮೆಟ್ರೊಪಾಲಿಟನ್ ವಸ್ತುಸಂಗ್ರಹಾಲಯದಲ್ಲಿಡಲಾಗಿತ್ತು. ಈ ಪೆಟ್ಟಿಗೆಯನ್ನು ಪ್ಯಾರಿಸ್‌ನ ಕಲಾ ಕೃತಿಗಳ ವರ್ತಕನಿಂದ 3.8 ಮಿಲಿಯನ್ ಡಾಲರ್‌ಗೆ (₹27.03ಕೋಟಿ) ಖರೀದಿಸಲಾಗಿತ್ತು.
ಕಳೆದ ಫೆಬ್ರುವರಿಯಲ್ಲಿ ಅಂತರರಾಷ್ಟ್ರೀಯ ಕಳ್ಳಸಾಗಾಣಿಕೆಯಲ್ಲಿ ಈ ಪೆಟ್ಟಿಗೆಯನ್ನು ಖರೀದಿಸಲಾಗಿತ್ತು ಎನ್ನುವುದು ಬಯಲಾಗಿತ್ತು. 2011ರಲ್ಲಿ ದಕ್ಷಿಣ ಈಜಿಪ್ಟ್‌ನ ಮಿನ್ಯಾನಿಂದ ಅಕ್ರಮವಾಗಿ ಇದನ್ನು ಸಾಗಿಸಲಾಗಿತ್ತು. ಯುಎಇ ಮತ್ತು ಜರ್ಮನಿ ಮೂಲಕ ಫ್ರಾನ್ಸ್‌ಗೆ ಈ ಪೆಟ್ಟಿಗೆಯನ್ನು ಕೊಂಡೊಯ್ಯಲಾಗಿತ್ತು ಎನ್ನುವುದು ತಿಳಿದು ಬಂದಿದೆ.
‘ಇಂತಹ ಅಪರೂಪದ ವಸ್ತು ಈಜಿಪ್ಟ್‌ಗೆ ಮರಳಿರುವುದು ಸಂತಸ ತಂದಿದೆ. ಕಳ್ಳತನ ಯಾವ ರೀತಿ ನಡೆಯಿತು ಎನ್ನುವ ಬಗ್ಗೆ ಕೆಲ ದಿನಗಳ ನಂತರ ತನಿಖೆ ಕೈಗೊಳ್ಳಲಾಗುವುದು’ ಎಂದು ಈಜಿಪ್ತ್‌ನ ಪ್ರಾಚೀನ ವಸ್ತುಗಳ ಸುಪ್ರೀಂ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಮೊಸ್ತ್‌ಫಾ ವಝಿರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.