ವಾಷಿಂಗ್ಟನ್: ಅಮೆರಿಕದಲ್ಲಿ ನಡೆದಿರುವ ಬೃಹತ್ ಆರೋಗ್ಯ ಸೇವೆಗಳ ವಂಚನೆ ಪ್ರಕರಣದಲ್ಲಿ ಒಬ್ಬ ಭಾರತೀಯ ಹಾಗೂ ಇಬ್ಬರು ಭಾರತೀಯ ಮೂಲದವರು ಸೇರಿ 193 ವೈದ್ಯಕೀಯ ವೃತ್ತಿಪರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ. ವಂಚನೆಯ ಉದ್ದೇಶಿತ ನಷ್ಟವು ಸುಮಾರು ₹23 ಸಾವಿರ ಕೋಟಿ ಆಗಿದ್ದರೆ, ನಿಜವಾದ ನಷ್ಟ ಸುಮಾರು ₹13 ಸಾವಿರ ಕೋಟಿ ಆಗಿದೆ ಎಂದು ಅದು ಹೇಳಿದೆ.
ನ್ಯಾಯಾಂಗ ಇಲಾಖೆಯು ಗುರುವಾರ 2024ರ ನ್ಯಾಷನಲ್ ಹೆಲ್ತ್ ಕೇರ್ ಫ್ರಾಡ್ ಎನ್‌ಫೋರ್ಸ್‌ಮೆಂಟ್ ಆ್ಯಕ್ಷನ್ ಅನ್ನು ಘೋಷಣೆ ಮಾಡಿತು. ವಂಚನೆ ಪ್ರಕರಣದ ಸಂಬಂಧ 76 ವೈದ್ಯರು, ನರ್ಸ್‌ಗಳು ಮತ್ತು ಪರವಾನಗಿ ಉಳ್ಳ ವೈದ್ಯಕೀಯ ವೃತ್ತಿಪರರ ವಿರುದ್ಧ ಅಮೆರಿಕದ 32 ಜಿಲ್ಲೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ನ್ಯಾಯಾಂಗ ಇಲಾಖೆ ಮಾಹಿತಿ ನೀಡಿದೆ.
₹1925 ಕೋಟಿ ನಗದು ಸೇರಿದಂತೆ ದುಬಾರಿ ವಾಹನಗಳು, ಚಿನ್ನ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.
ಹೈದರಾಬಾದ್‌ನ ವಿಜಿಲ್ ರಾಹುಲನ್, ಒನ್ ವರ್ಲ್ಡ್ ಥೆರಪಿಯ ಮಾಲೀಕ ಜಸ್‌ಪ್ರೀತ್ ಜಗಪಾಲ್, ಉತ್ತರ ವರ್ಜೀನಿಯಾದಲ್ಲಿ ಕಚೇರಿ ಹೊಂದಿರುವ ಮನೋವೈದ್ಯ ರಾಮ ಪ್ರಯಾಗ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಗ್ಯ ವಿಮೆಯಲ್ಲಿ ವಂಚನೆ ಮಾಡಿರುವುದು ಸೇರಿದಂತೆ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.