ಕಠ್ಮಂಡು: ಇಸ್ರೇಲ್ ದಕ್ಷಿಣ ಭಾಗದಲ್ಲಿ ಹಮಾಸ್ ಬಂಡುಕೋರರು ನಡೆಸಿದ ರಾಕೆಟ್ ದಾಳಿಯಲ್ಲಿ ನೇಪಾಳದ ಹತ್ತು ವಿದ್ಯಾರ್ಥಿಗಳು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ನೇಪಾಳ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.
‘ಗಾಜಾ ಪಟ್ಟಿ ಸಮೀಪದ ಕುಬುಝ್ ಅಲುಮಿಮ್‌ನಲ್ಲಿ ಕೆಲಸ ಮಾಡುತ್ತಿದ್ದ 17 ನೇಪಾಳಿ ಪ್ರಜೆಗಳ ಪೈಕಿ ಇಬ್ಬರು ಪಾರಾಗಿದ್ದಾರೆ, ನಾಲ್ವರು ಗಾಯಗೊಂಡಿದ್ದಾರೆ. ಒಬ್ಬ ಕಾಣೆಯಾಗಿದ್ದಾನೆ’ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
‘ನೇಪಾಳದ ಹತ್ತು ಪ್ರಜೆಗಳ ಸಾವಿನ ಮಾಹಿತಿ ಸಿಕ್ಕಿದೆ. ಕಾಣೆಯಾದ ನೇಪಾಳಿ ಪ್ರಜೆ ಹುಡುಕುವ ಪ್ರಯತ್ನಗಳು ನಡೆಯುತ್ತಿವೆ. ಗುರುತು ಪತ್ತೆ ಕಾರ್ಯ ಪೂರ್ಣಗೊಂಡ ಕೂಡಲೇ ಮೃತದೇಹಗಳನ್ನು ನೇಪಾಳಕ್ಕೆ ತರಲಾಗುವುದು’ ಎಂದು ಜೆರುಸಲೇಂನಲ್ಲಿರುವ ನೇಪಾಳದ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಬಂಕರ್‌ನಲ್ಲಿ ಸಿಲುಕಿರುವ ಕೆಲವು ವಿದ್ಯಾರ್ಥಿಗಳು ವಿಡಿಯೊ ಸಂದೇಶ ಕಳುಹಿಸಿದ್ದು, ತಮ್ಮನ್ನು ಸ್ಥಳಾಂತರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಕೋರಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
‘ಬಂಕರ್‌ನಲ್ಲಿ ನಾವು ಸುರಕ್ಷಿತವಾಗಿಲ್ಲ. ಇತ್ತೀಚೆಗೆ ಬಂಕರ್ ಪ್ರವೇಶಿಸಿದ ಹಮಾಸ್ ಬಂಡುಕೋರರು ನಮ್ಮ ಸ್ನೇಹಿತರನ್ನು ಕ್ರೂರವಾಗಿ ಕೊಂದರು. ನಮಗೂ ಅದೇ ಪರಿಸ್ಥಿತಿ ಆಗುವುದನ್ನು ಬಯಸುವುದಿಲ್ಲ’ ಎಂದು ವಿದ್ಯಾರ್ಥಿಗಳು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ ಎಂದು ಆನ್‌ಲೈನ್ ಸುದ್ದಿ ತಾಣ setopati.com ವರದಿ ಮಾಡಿದೆ.
ಸ್ವದೇಶಕ್ಕೆ ಮರಳಲು ಬಯಸುವ ಪ್ರಜೆಗಳನ್ನು ಕರೆತರಲು ಇಸ್ರೇಲ್ ಸರ್ಕಾರ ಮತ್ತು ಟೆಲ್ ಅವೀವ್‌ನಲ್ಲಿರುವ ರಾಯಭಾರ ಕಚೇರಿಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.