ADVERTISEMENT

ಸಾಯುವ ಮುನ್ನ ಬಾಲ್ಯದ ಗೆಳೆಯನ ವರಿಸಿದ 10 ವರ್ಷದ ಬಾಲಕಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಆಗಸ್ಟ್ 2023, 11:42 IST
Last Updated 9 ಆಗಸ್ಟ್ 2023, 11:42 IST
ಬಾಲ್ಯದ ಗೆಳೆಯನನ್ನು ಮದುವೆಯಾದ ಎಮ್ಮಾ ಎಡ್ವರ್ಡ್ಸ್‌ (ಚಿತ್ರ: Erick Messer photography/Kennedy News)
ಬಾಲ್ಯದ ಗೆಳೆಯನನ್ನು ಮದುವೆಯಾದ ಎಮ್ಮಾ ಎಡ್ವರ್ಡ್ಸ್‌ (ಚಿತ್ರ: Erick Messer photography/Kennedy News)   

ವಾಷಿಂಗ್ಟನ್‌ : ರಕ್ತದ ಕ್ಯಾನ್ಸರ್‌(ಲುಕೇಮಿಯಾ) ನಿಂದ ಬಳಲುತ್ತಿದ್ದ 10 ವರ್ಷದ ಹುಡುಗಿಯೊಬ್ಬಳು ಸಾಯುವುದಕ್ಕೂ ಮುನ್ನ ತನ್ನ ಬಾಲ್ಯದ ಗೆಳೆಯನನ್ನು ಮದುವೆಯಾಗಿದ್ದಾಳೆ.

ಅಮೆರಿಕದ ಎಮ್ಮಾ ಎಡ್ವರ್ಡ್ಸ್‌ ಕಳೆದ ವರ್ಷ ಏಪ್ರಿಲ್‌ನಲ್ಲಿ ‘ಅಕ್ಯುಟ್‌ ಲಿಂಫೋಬ್ಲಾಸ್ಟಿಕ್ ಲುಕೇಮಿಯಾ’ಕ್ಕೆ ತುತ್ತಾಗಿದ್ದಳು. ಇದೊಂದು ಗುಣಪಡಿಸಲಾಗದ ಕಾಯಿಲೆಯಾಗಿದೆ. ಮಗಳ ಸ್ಥಿತಿ ಕಂಡು ಚಿಂತಾಜನಕರಾದ ಪೋಷಕರು ಆಕೆಯ ಕೊನೆ ಆಸೆ ಪೂರೈಸಿದ್ದಾರೆ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ.

‘ಎಲ್ಲ ರೀತಿಯ ಚಿಕಿತ್ಸೆ ಕೊಡಿಸಿದ್ದೇವೆ. ಆದರೆ ಯಾವ ಚಿಕಿತ್ಸೆಯಿಂದಲೂ ಮಗಳ ಕಾಯಿಲೆ ವಾಸಿಯಾಗಲಿಲ್ಲ. ಒಂದು ವಾರ ಅಥವಾ ಅದಕ್ಕೂ ಮೊದಲು ಪ್ರಾಣ ಹೋಗಬಹುದೆಂದು ವೈದ್ಯರು ಹೇಳಿದ್ದರು. ವಿಷಯ ಕೇಳಿ ನಮಗೆ ದಿಕ್ಕು ತೋಚದಂತಾಗಿತ್ತು. ಅದ್ದೂರಿಯಾಗಿ ಮದುವೆಯಾಗಬೇಕೆಂಬುವುದು ಅವಳ ಕನಸಾಗಿತ್ತು. ಅದನ್ನು ನೆರವೆರಿಸಿದ್ದೇವೆ’ ಎಂದು ಎಮ್ಮಾ ತಾಯಿ ಅಲೀನಾ ‘ಕೆನಡಿ ನ್ಯೂಸ್’ ಪತ್ರಿಕೆಗೆ ತಿಳಿಸಿದ್ದಾರೆ.

ADVERTISEMENT

‘ಮಗಳ ಆಸೆಯಂತಯೇ ಅವಳ ಬಾಲ್ಯದ ಗೆಳೆಯ ಡೇನಿಯಲ್ ಮಾರ್ಷಲ್ ಕ್ರಿಸ್ಟೋಫರ್(ಡಿಜೆ) ಜೊತೆ ಜೂನ್‌ 29ರಂದು ಮದುವೆ ಮಾಡಿಸಿದೆವು. ಡಿಜೆ ತಾಯಿ ಮತ್ತು ನಾನು ಕೇವಲ ಎರಡು ದಿನಗಳಲ್ಲಿ ಮದುವೆ ತಯಾರಿ ನಡೆಸಿದ್ದೆವು. ಸುಮಾರು 100 ಜನರ ಸಮ್ಮುಖದಲ್ಲಿ ಅವಳ ಮದುವೆ ನೆರವೇರಿತು. ಇದೊಂದು ಮರೆಯಲಾಗದ ಕ್ಷಣವಾಗಿದೆ. ಮದುವೆಯಾದ 12 ದಿನಕ್ಕೆ ಅವಳು ಅಸುನೀಗಿದಳು’ ಎಂದು ಭಾವುಕರಾದರು.

‘ಏಪ್ರಿಲ್‌ 2022ರಂದು ಮಗಳಿಗೆ ಕ್ಯಾನ್ಸರ್‌ ಇರುವುದು ತಿಳಿಯಿತು. ಮಕ್ಕಳಲ್ಲಿ ಕ್ಯಾನ್ಸರ್‌ ಕಾಣಿಸಿಕೊಳ್ಳುವುದು ಸಹಜವೆಂದು ವೈದ್ಯರು ಧೈರ್ಯ ತುಂಬಿದ್ದರು. ಮಗಳು ಕ್ಯಾನ್ಸರ್‌ನಿಂದ ವಾಸಿಯಾಗಿ ಎಲ್ಲರಂತೆ ಬದುಕುತ್ತಾಳೆ ಎಂದು ಬಯಸಿದ್ದೆವು. ಆದರೆ ನಾವು ಎಣಿಸಿದಂತೆ ಏನೂ ಆಗಲಿಲ್ಲ. ಎಲ್ಲವೂ ವಿಧಿಯಾಟದಂತೆಯೇ ನಡೆಯಿತು. ನನ್ನ ಮಗಳ ಮೂಳೆಯಲ್ಲಿ ಕ್ಯಾನ್ಸರ್‌ ಕಾಣಿಸಿಕೊಂಡಿತ್ತು. ಇದು ಗುಣಪಡಿಸಲು ಸಾಧ್ಯವಾಗದ ಕಾಯಿಲೆ ಎಂದು ನಮಗೆ ಆನಂತರ ತಿಳಿಯಿತು’ ಎಂದು ಹೇಳಿದರು.

ಏನಿದು ಅಕ್ಯುಟ್‌ ಲಿಂಫೋಬ್ಲಾಸ್ಟಿಕ್ ಲುಕೇಮಿಯಾ?

‘ಅಕ್ಯುಟ್‌ ಲಿಂಫೋಬ್ಲಾಸ್ಟಿಕ್ ಲುಕೇಮಿಯಾ’ ಎನ್ನುವುದು ಲುಕೇಮಿಯಾದ (ರಕ್ತದ ಕ್ಯಾನ್ಸರ್‌) ಒಂದು ವಿಧವಾಗಿದೆ. ಲುಕೇಮಿಯಾ ಇದು ರಕ್ತದ ಮತ್ತು ಮೂಳೆಯ ಕ್ಯಾನ್ಸರ್‌ ಆಗಿದೆ. ಬಿಳಿ ರಕ್ತ ಕಣ ವಿಪರೀತ ಹೆಚ್ಚುವುದಿಂದ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಲುಕೇಮಿಯಾವನ್ನು ಆರಂಭದ ಹಂತದಲ್ಲಿಯೇ ಗುಣಪಡಿಸುವುದು ಸುಲಭ. ಕ್ಯಾನ್ಸರ್‌ ವ್ಯಾಪಿಸಿದರೆ ಗುಣಪಡಿಸಲು ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.