ADVERTISEMENT

ನೇಪಾಳ: ಹಿಂದೂ ರಾಷ್ಟ್ರಕ್ಕಾಗಿ 'ಪ್ರಚಂಡ' ವಿರುದ್ಧ ಶತಾಯುಷಿ ಸ್ಪರ್ಧೆ

ಪಿಟಿಐ
Published 1 ನವೆಂಬರ್ 2022, 11:48 IST
Last Updated 1 ನವೆಂಬರ್ 2022, 11:48 IST
ನೇಪಾಳ ಮಾಜಿ ಪ್ರಧಾನಿ ಪುಷ್ಪಕಮಲ್‌ ದಹಲ್‌ 'ಪ್ರಚಂಡ' | ಟ್ವಿಟರ್‌ ಚಿತ್ರ
ನೇಪಾಳ ಮಾಜಿ ಪ್ರಧಾನಿ ಪುಷ್ಪಕಮಲ್‌ ದಹಲ್‌ 'ಪ್ರಚಂಡ' | ಟ್ವಿಟರ್‌ ಚಿತ್ರ   

ಕಠ್ಮಂಡು: ನವೆಂಬರ್‌ 20ಕ್ಕೆ ನೇಪಾಳ ಲೋಕಸಭೆ ಚುನಾವಣೆ ನಡೆಯಲಿದ್ದು, 100 ವರ್ಷದ ಸ್ವಾತಂತ್ರ್ಯ ಹೋರಾಟಗಾರರೊಬ್ಬರು ಕಣಕ್ಕಿಳಿದಿರುವುದು ಗಮನ ಸೆಳೆದಿದೆ.

ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಗುರಿ ಹೊಂದಿರುವ ಶತಾಯುಷಿ ಟಿಕಾ ದತ್ತಾ ಪೊಖರೆಲ್‌ ಅವರು ಅಲ್ಲಿನ ಮಾಜಿ ಪ್ರಧಾನಿ ಪುಷ್ಪಕಮಲ್‌ ದಹಲ್‌ 'ಪ್ರಚಂಡ' ವಿರುದ್ಧ ಸ್ಪರ್ಧಿಸಿದ್ದಾರೆ.

ಗೋರ್ಖಾ ಜಿಲ್ಲೆಯಲ್ಲಿ ಜನಿಸಿರುವ ಪೊಖರೆಲ್‌ ಅವರು ಗೋರ್ಖಾ 2 ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದ್ದಿದ್ದಾರೆ. ಈ ಕ್ಷೇತ್ರದಲ್ಲಿ 67 ವರ್ಷದ ಪ್ರಚಂಡ ಅವರ ವಿರುದ್ಧ ಇನ್ನೂ 11 ಮಂದಿ ಸ್ಪರ್ಧೆಯಲ್ಲಿದ್ದಾರೆ ಎಂದು ನೇಪಾಳಿ ಕಾಂಗ್ರೆಸ್‌ (ಬಿಪಿ)ನ ಅಧ್ಯಕ್ಷ ಸುಶೀಲ್‌ ಮನ್‌ ಸೆರ್‌ಚನ್‌ ತಿಳಿಸಿದ್ದಾರೆ. ನೇಪಾಳಿ ಕಾಂಗ್ರೆಸ್‌ (ಬಿಪಿ), ಇದು ಆಡಳಿತರೂಢ ನೇಪಾಳಿ ಕಾಂಗ್ರೆಸ್‌ನ ಒಡೆದ ಬಣವಾಗಿದೆ.

ಚುನಾವಣೆ ಆಯೋಗವು ನೇಪಾಳಿ ಕಾಂಗ್ರೆಸ್‌ (ಬಿಪಿ) ಅಭ್ಯರ್ಥಿಯನ್ನಾಗಿ ಪೊಖರೆಲ್‌ ಅವರ ಹೆಸರನ್ನು ದಾಖಲಿಸಿಕೊಳ್ಳುವಾಗ ಅವರಿಗೆ 99 ವರ್ಷ. ಸೋಮವಾರ 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ADVERTISEMENT

ಪೊಖರೆಲ್‌ ಅವರು ನಡೆಯುತ್ತಾರೆ, ಚೆನ್ನಾಗಿ ಮಾತನಾಡುತ್ತಾರೆ ಮತ್ತು ರಾಜಕೀಯದಲ್ಲಿ ತುಂಬ ಸಕ್ರಿಯರಾಗಿದ್ದಾರೆ ಎಂದು ಸೆರ್‌ಚನ್‌ ವಿವರಿಸಿದ್ದಾರೆ.

ನೀರಿನ ಪಾತ್ರೆಯ ಚಿನ್ಹೆಯಡಿ ಸ್ಪರ್ಧಿಸುತ್ತಿರುವ ಪೊಖರೆಲ್‌ ಅವರು 7 ಮಕ್ಕಳ ತಂದೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅತ್ಯಂತ ಹಿರಿಯ ಅಭ್ಯರ್ಥಿ ಎಂದು ಪೊಖರೆಲ್‌ ಗುರುತಿಸಿಕೊಂಡಿದ್ದಾರೆ.

'ರಾಷ್ಟ್ರದಲ್ಲಿ ಯಾರೂ ನಿಜವಾದ ನಾಯಕರಿಲ್ಲ ಮತ್ತು ತಮ್ಮನ್ನು ನಾಯಕರು ಎಂದು ಹೇಳಿಕೊಳ್ಳುವವರು ಕೇವಲ ದುಡ್ಡು ಮಾಡುವುದಕ್ಕೆ ರಾಜಕೀಯ ಬರುತ್ತಾರೆ' ಎಂದು ಪೊಖರೆಲ್‌ ಹೇಳುವ ಮಾತನ್ನು ಈ ಸಂದರ್ಭ ಸೆರ್‌ಚನ್‌ ಉಲ್ಲೇಖಿಸಿದ್ದಾರೆ.

ಮೊದಲ ಬಾರಿಗೆ ಚುನಾವಣೆಗೆ ಇಳಿದಿರುವ ಪೊಖರೆಲ್‌ ಅವರು, 'ಜನರ ಹಕ್ಕಿಗಾಗಿ ಮತ್ತು ನಮ್ಮ ರಾಷ್ಟ್ರವನ್ನು ಪುನಃ ಹಿಂದೂ ರಾಷ್ಟ್ರವನ್ನಾಗಿಸಲು ನಾನು ಸ್ಪರ್ದಿಸುತ್ತಿದ್ದೇನೆ' ಎಂದಿದ್ದಾರೆ. 2008ರಲ್ಲಿ ನೇಪಾಳವು 239 ವರ್ಷಗಳಿಂದ ಇದ್ದ 'ಹಿಂದೂ ರಾಷ್ಟ್ರ' ಎಂಬ ಹಣೆಪಟ್ಟಿಯನ್ನು ರದ್ದುಪಡಿಸಿದೆ.

ನಾನೆಂತಹ ವ್ಯಕ್ತಿ ಎಂಬುದು ಗೋರ್ಖದ ಕಲ್ಲು ಮತ್ತು ಮಣ್ಣಿಗೂ ಗೊತ್ತು. ನನ್ನ ಪ್ರತಿಸ್ಪರ್ಧಿಗೂ ಚೆನ್ನಾಗಿ ನನ್ನ ಬಗ್ಗೆ ಗೊತ್ತು. ಈ ರಾಷ್ಟ್ರದ ನಾಯಕರು ಜನರ ಸೇವೆ ಮಾಡುವ ಬದಲು ನೀತಿಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ, ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಪೊಖರೆಲ್‌ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.